ಕರಾಚಿ: ಭಾರತವೂ ಸೇರಿದಂತೆ ಕಳೆದ ಏಕದಿನ ವಿಶ್ವಕಪ್ ನಲ್ಲಿ ಅಗ್ರ 8 ರೊಳಗೆ ಸ್ಥಾನ ಪಡೆದಿದ್ದ ಪ್ರಮುಖ ತಂಡಗಳು ಭಾಗಿಯಾಗಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ದಿನಾಂಕ ಬಯಲಾಗಿದೆ.
2025 ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಟೂರ್ನಮೆಂಟ್ ನಡೆಯಲಿದೆ. ಆದರೆ ಈ ಟೂರ್ನಮೆಂಟ್ ನಲ್ಲಿ ಭಾರತ ಭಾಗವಹಿಸುವುದೇ ಅನುಮಾನವಾಗಿದೆ. ಯಾಕೆಂದರೆ ಈ ಟೂರ್ನಮೆಂಟ್ ಆತಿಥ್ಯ ಪಾಕಿಸ್ತಾನದ್ದಾಗಿದ್ದು, ಪಾಕಿಸ್ತಾನದಲ್ಲಿಯೇ ಟೂರ್ನಮೆಂಟ್ ನಡೆಸಲಾಗುತ್ತದೆ.
ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿ ಮೈದಾನಗಳಲ್ಲಿ ಪಂದ್ಯ ಆಯೋಜಿಸಲು ಪಾಕಿಸ್ತಾನ ತೀರ್ಮಾನಿಸಿದೆ. ಲಾಹೋರ್ ಭಾರತಕ್ಕೆ ಸಮೀಪವಿರುವ ಕಾರಣ ಟೀಂ ಇಂಡಿಯಾ ಆಡಲಿರುವ ಪಂದ್ಯಗಳನ್ನು ಲಾಹೋರ್ ನಲ್ಲಿ ನಡೆಸಲು ಉದ್ದೇಶಿಸಿದೆ. ಆದರೆ ಈ ಟೂರ್ನಿಗೆ ಭಾರತ ತಂಡ ಪಾಕಿಸ್ತಾನ ಪ್ರವಾಸ ಮಾಡುವುದೇ ಅನುಮಾನವಾಗಿದೆ.
ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಕ್ಕೆ ಪ್ರವಾಸ ಮಾಡಲು ಭಾರತ ತಂಡಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ಸುರಕ್ಷತಾ ದೃಷ್ಟಿಯಿಂದ ಭಾರತ ಹಲವು ವರ್ಷಗಳಿಂದ ಪಾಕಿಸ್ತಾನ ಪ್ರವಾಸ ಮಾಡಿಲ್ಲ. ಆದರೆ ಶ್ರೀಲಂಕಾ, ನ್ಯೂಜಿಲೆಂಡ್ ನಂತಹ ರಾಷ್ಟ್ರಗಳು ಪಾಕಿಸ್ತಾನಕ್ಕೆ ತೆರಳಿ ಕ್ರಿಕೆಟ್ ಸರಣಿಗಳನ್ನು ಆಡಿವೆ.
ಒಂದು ವೇಳೆ ಭಾರತ ಐಸಿಸಿ ಮೇಲೆ ಒತ್ತಡ ಹಾಕಿ ಟೂರ್ನಿ ಸ್ಥಳಾಂತರಿಸುವುದಿದ್ದರೂ ಬೇರೆ ದೇಶದಿಂದ ಬೆಂಬಲ ಸಿಗುವುದು ಅನುಮಾನವಾಗಿದೆ. ಹೀಗಾಗಿ ಭಾರತ ಒಂದೋ ಅನಿವಾರ್ಯವಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಬೇಕಾಗುತ್ತದೆ, ಇಲ್ಲವೇ ಟೂರ್ನಿಯಿಂದಲೇ ವಾಕ್ ಔಟ್ ಮಾಡಬೇಕಾಗಬಹುದು.