ಟಿ20 ವಿಶ್ವಕಪ್ ಕ್ರಿಕೆಟ್: ಇಂದಿನ ಭಾರತ, ಪಾಕಿಸ್ತಾನ ರೋಚಕ ಪಂದ್ಯದ ಪಿಚ್ ಯಾರಿಗೆ ಅನುಕೂಲಕಾರಿ

Krishnaveni K

ಭಾನುವಾರ, 9 ಜೂನ್ 2024 (09:31 IST)
ನ್ಯೂಯಾರ್ಕ್: ಟಿ20 ವಿಶ್ವಕಪ್ ನಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಭಾನುವಾರದ ರಜಾ ದಿನಕ್ಕೆ ಸಾಂಪ್ರದಾಯಿಕ ಎದುರಾಳಿಗಳ ರೋಚಕ ಪಂದ್ಯಕ್ಕೆ ವಿಶ್ವವೇ ಸಾಕ್ಷಿಯಾಗಲಿದೆ.

ನ್ಯೂಯಾರ್ಕ್ ನ ನಾಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಇದುವರೆಗೆ ಇಲ್ಲಿ ನಡೆದ ಎಲ್ಲಾ ಪಂದ್ಯಗಳಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ತಂಡವೇ ಮೇಲುಗೈ ಸಾಧಿಸಿದೆ. ಇಲ್ಲಿನ ಪಿಚ್ ನಿಧಾನಗತಿಯದ್ದಾಗಿದ್ದು ಮೊದಲು ಬ್ಯಾಟಿಂಗ್ ಕಷ್ಟವಾಗಲಿದೆ. ಹೀಗಾಗಿ ಇದುವರೆಗೆ ಯಾವುದೇ ತಂಡಗಳೂ ರನ್ ರಾಶಿ ಪೇರಿಸಿಲ್ಲ.

ಟೀಂ ಇಂಡಿಯಾಕ್ಕೆ ಇಂದು ಗಾಯಗೊಂಡಿರುವ ನಾಯಕ ರೋಹಿತ್ ಶರ್ಮಾ ಲಭ್ಯರಾಗಲಿದ್ದಾರೆಯೇ ಎಂಬುದು ಕುತೂಹಲಕಾರಿಯಾಗಿದೆ. ಒಂದು ವೇಳೆ ರೋಹಿತ್ ಗೈರಾದರೆ ಯಶಸ್ವಿ ಜೈಸ್ವಾಲ್ ತಂಡದಲ್ಲಿ ಸ್ಥಾನ ಪಡೆಯಲಿದ್ದು ಆರಂಭಿಕರಾಗಿ ಕಣಕ್ಕಿಳಿಯಬಹುದು.
ಇದರ ಹೊರತಾಗಿ ತಂಡದಲ್ಲಿ ಹೆಚ್ಚಿನ ಬದಲಾವಣೆ ಇರದು. ಕಳೆದ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಎಲ್ಲರೂ ಅದ್ಭುತ ಪ್ರದರ್ಶನ ತೋರಿದ್ದರು. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆಯಿಲ್ಲ. ರೋಹಿತ್ ಲಭ್ಯರಾದರೆ ಬ್ಯಾಟಿಂಗ್ ನಲ್ಲೂ ಯಥಾವತ್ತು ತಂಡ ಕಣಕ್ಕಿಳಿಯಬಹುದು.

ಇತ್ತ ಪಾಕಿಸ್ತಾನಕ್ಕೆ ಕಳೆದ ಪಂದ್ಯದಲ್ಲಿ ಅಮೆರಿಕಾ ಎದುರು ಸಿಕ್ಕ ಸೂಪರ್ ಓವರ್ ಸೋಲು ಆತ್ಮವಿಶ್ವಾಸ ಕುಗ್ಗಿಸಿದೆ. ಹಾಗಿದ್ದರೂ ಎದುರಾಳಿ ಭಾರತವಾಗಿರುವಾಗ ಪಾಕ್ ತಂಡಕ್ಕೂ ಉತ್ಸಾಹ ಹೆಚ್ಚಿಸಬಹುದು. ಬಾಬರ್ ಅಜಮ್, ಶಾಹಿನ್ ಅಫ್ರಿದಿಯಂತಹ ಪ್ರತಿಭಾವಂತರನ್ನೊಳಗೊಂಡ ಪಾಕ್ ಯಾವ ರೀತಿ ಭಾರತದ ವಿರುದ್ಧ ತಿರುಗಿಬೀಳುತ್ತದೆ ಎಂದು ಕಾದುನೋಡಬೇಕಿದೆ. ಈ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಹಾಟ್ ಸ್ಟಾರ್ ಆಪ್ ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ