ಕರಾಚಿ: ಅಂದು ಟೀಂ ಇಂಡಿಯಾ ಕೋಚ್ ಆಗಿ ಸಾಕಷ್ಟು ಯಶಸ್ಸು, ಸ್ಥಾನ-ಮಾನ ಕಂಡಿದ್ದ ಗ್ಯಾರಿ ಕರ್ಸ್ಟನ್ ಈಗ ಪಾಕಿಸ್ತಾನ ತಂಡದ ಕೋಚ್ ಆಗಿ ಇನ್ನಿಲ್ಲದ ಅವಮಾನ ಅನುಭವಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಟಿ20 ವಿಶ್ವಕಪ್, ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆ ತಂಡದ ಸ್ಟಾರ್ ವೇಗಿ ಶಾಹಿನ್ ಅಫ್ರಿದಿ ತಮ್ಮ ಜೊತೆ ಅಸಭ್ಯ ವರ್ತನೆ ತೋರಿದ್ದಾರೆ ಎಂದು ಈಗ ಗ್ಯಾರಿ ಅಳಲು ತೋಡಿಕೊಂಡಿದ್ದಾರೆ. ಪಾಕ್ ತಂಡ ಟಿ20 ವಿಶ್ವಕಪ್ ನಲ್ಲಿ ಹೀನಾಯವಾಗಿ ಸೋತ ಬೆನ್ನಲ್ಲೇ ಗ್ಯಾರಿ ತಂಡದ ಸ್ಥಿತಿಗತಿ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಪಾಕಿಸ್ತಾನ ಒಂದು ತಂಡವೇ ಅಲ್ಲ. ಇಲ್ಲಿ ಒಗ್ಗಟ್ಟು ಎಂಬುದೇ ಇಲ್ಲ. ಬಾಬರ್ ಮತ್ತು ಶಾಹಿನ್ ಅಫ್ರಿದಿ ಇಬ್ಬರದ್ದೂ ಬೇರೆ ಬೇರೆ ಬಣವಿದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಇದೀಗ ಕಳೆದ ಎರಡು ಸರಣಿಗಳ ವೇಳೆ ಶಾಹಿನ್ ಅಫ್ರಿದಿ ತಮ್ಮ ಜೊತೆ ಯಾವ ರೀತಿ ನಡೆದುಕೊಂಡಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ.
ಶಾಹಿನ್ ಅಫ್ರಿದಿ ಮುಖ್ಯ ಕೋಚ್ ಗ್ಯಾರಿ ಮತ್ತು ಇತರೆ ಸಹಾಯಕ ಸಿಬ್ಬಂದಿಗಳ ಜೊತೆ ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ಮಂಡಳಿಗೆ ದೂರು ನೀಡಲಾಗಿತ್ತು. ಹಾಗಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವರದಿಯಾಗಿದೆ. ಭಾರತ ತಂಡದಲ್ಲಿ ಕೋಚ್ ಆಗಿ ಗೌರವಯುತ ವಿದಾಯ ಪಡೆದಿದ್ದ ಗ್ಯಾರಿ ಈಗ ಪಾಕ್ ತಂಡದಲ್ಲಿ ಅವಮಾನ ಎದುರಿಸುವಂತಾಗಿದೆ.