ನ್ಯೂಯಾರ್ಕ್: ಟಿ20 ವಿಶ್ವಕಪ್ ಆಡಲು ಅಮೆರಿಕಾಗೆ ತೆರಳಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಈಗ ಹಣ ವಸೂಲಿ ದಂಧೆಗಿಳಿದಿದೆ. ಪಾಕ್ ಕ್ರಿಕೆಟಿಗರ ವರ್ತನೆಗೆ ಈಗ ಭಾರೀ ಟೀಕೆ ವ್ಯಕ್ತವಾಗಿದೆ.
ಜೂನ್ 6 ರಂದು ಪಾಕಿಸ್ತಾನ ಮೊದಲ ಪಂಧ್ಯವನ್ನು ಅತಿಥೇಯ ಯುಎಸ್ ಎ ವಿರುದ್ಧ ಆಡಲಿದೆ. ಆದರೆ ಇದಕ್ಕೆ ಮೊದಲು ಪಂದ್ಯಕ್ಕೆ ತಯಾರಿ ನಡೆಸುವುದು ಬಿಟ್ಟು ಹಣ ವಸೂಲಿ ದಂಧೆಗಿಳಿದಿದೆ. ಇದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಮೊದಲ ಪಂದ್ಯಕ್ಕೆ ಮುನ್ನ ಪಾಕ್ ಕ್ರಿಕೆಟಿಗರು ಅಮೆರಿಕಾದಲ್ಲಿ ಅಭಿಮಾನಿಗಳ ಜೊತೆ ಔತಣಕೂಟ ಏರ್ಪಡಿಸಿದ್ದಾರೆ. ಇದು ಇಷ್ಟೇ ಆಗಿದ್ದರೆ ತೊಂದರೆ ಇರುತ್ತಿರಲಿಲ್ಲ. ಆದರೆ ಔತಣ ಕೂಟದಲ್ಲಿ ಭಾಗಿಯಾಗಲು ಅಭಿಮಾನಿಗಳಿಗೆ 25 ಅಮೆರಿಕನ್ ಡಾಲರ್ ಹಣ ಪಾವತಿ ಮಾಡಲು ಸೂಚಿಸಿದೆ.
ಪಾಕ್ ಕ್ರಿಕೆಟಿಗರೇನೋ ತಾವು ಅಭಿಮಾನಿಗಳಿಗೆ ದೊಡ್ಡ ಆಫರ್ ನೀಡಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದು, ಅಭಿಮಾನದ ನೆಪದಲ್ಲಿ ಆಟಗಾರರು ಹಣ ವಸೂಲಿ ದಂಧೆಗಿಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ, ಕ್ರಿಕೆಟಿಗರಿಗೆ ಇಂತಹದ್ದೊಂದು ದಂಧೆ ನಡೆಸಲು ಅವಕಾಶ ಮಾಡಿಕೊಟ್ಟ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಸ್ವತಃ ಪಾಕ್ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ.