ದುಬೈ: ಇತ್ತೀಚೆಗೆ ರೋಹಿತ್ ಶರ್ಮಾ ಡುಮ್ಮ ಎಂದು ತೆಗಳಿ ಕೆಂಗಣ್ಣಿಗೆ ಗುರಿಯಾಗಿದ್ದ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಈಗ ರಂಜಾನ್ ಉಪವಾಸ ಕೈ ಬಿಟ್ಟು ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತಿದ್ದಾರೆ.
ರೋಹಿತ್ ಶರ್ಮಾ ದಪ್ಪಗಿದ್ದಾರೆ, ಅವರು ನಾಯಕರು ಆಗಲು ಅನ್ ಫಿಟ್ ಎಂದು ಶಮಾ ನೀಡಿದ್ದ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೆ ಸ್ವತಃ ಕಾಂಗ್ರೆಸ್ ಹೈಕಮಾಂಡ್ ಶಮಾಗೆ ಛೀಮಾರಿ ಹಾಕಿತ್ತು. ಇದಾದ ಬಳಿಕ ಅವರು ಸೈಲೆಂಟ್ ಆಗಿದ್ದರು.
ಇದೀಗ ಮೊಹಮ್ಮದ್ ಶಮಿ ರಂಜಾನ್ ಉಪವಾಸ ಕೈ ಬಿಟ್ಟಿರುವ ಬಗ್ಗೆ ಟೀಕೆಗೆ ಗುರಿಯಾಗಿದ್ದು ಅವರ ಬೆಂಬಲಕ್ಕೆ ನಿಂತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ರಂಜಾನ್ ಉಪವಾಸವನ್ನೂ ಕೈ ಬಿಟ್ಟು ಹಣ್ಣಿನ ರಸ ಸೇವನೆ ಮಾಡುತ್ತಿರುವ ಶಮಿ ಫೋಟೋ ವೈರಲ್ ಆಗಿತ್ತು. ದೇಶಕ್ಕಾಗಿ ಉಪವಾಸ ಕೈ ಬಿಟ್ಟರು ಎಂದು ಹಲವರು ಕೊಂಡಾಡಿದ್ದರು. ಆದರೆ ಕೆಲವು ಮುಸ್ಲಿಂ ಧರ್ಮಗುರುಗುಳು ಶಮಿಯನ್ನು ಟೀಕಿಸಿದ್ದರು. ಎಂತಹದ್ದೇ ಕಷ್ಟವಿದ್ದರೂ ಧರ್ಮದ ಆಚರಣೆ ಬಿಡಬಾರದು ಎಂದಿದ್ದರು.
ಇದೀಗ ಶಮಿ ಬೆಂಬಲಕ್ಕೆ ಶಮಾ ನಿಂತಿದ್ದಾರೆ. ಮುಸ್ಲಿಮರು ಪ್ರಯಾಣ ಮಾಡುವಾಗ ಉಪವಾಸ ಕೈ ಬಿಟ್ಟರೆ ತೊಂದರೆಯಿಲ್ಲ. ಮೊಹಮ್ಮದ್ ಶಮಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಉಪವಾಸ ಕೈ ಬಿಟ್ಟರೆ ತಪ್ಪಿಲ್ಲ. ಅಲ್ಲದೆ ಅವರು ಕ್ರೀಡಾಳು, ಹೀಗಾಗಿ ಬಾಯಾರುವುದು ಸಹಜ. ಕ್ರೀಡೆಯಲ್ಲಿ ಭಾಗಿಯಾಗಿರುವಾಗ ಉಪವಾಸವಿರಬೇಕು ಎಂದು ಯಾರೂ ಹೇಳಲ್ಲ ಎಂದಿದ್ದಾರೆ.