ದುಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಸತತ ಗೆಲುವು ಕಂಡು ಫೈನಲ್ ಗೇರಿದ ಮೇಲೆ ಬೇರೆ ತಂಡಗಳಿಗೆ ಯಾಕೆ ಹೊಟ್ಟೆ ಉರಿ ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ.
ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು ಬಗ್ಗು ಬಡಿದ ಟೀಂ ಇಂಡಿಯಾ ಫೈನಲ್ ಗೇರಿದ ಮೇಲಂತೂ ಭಾರತ ಒಂದೇ ತಾಣದಲ್ಲಿ ಆಡುವ ಲಾಭ ಸಿಗುತ್ತಿದೆ ಎಂದು ಎಲ್ಲಾ ತಂಡಗಳೂ ಲಬೋ ಲಬೋ ಎಂದು ಬಾಯಿ ಬಡಿದುಕೊಳ್ಳುತ್ತಿವೆ.
ಮೊದಲು ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅಪಸ್ವರವೆತ್ತಿದ್ದರು. ಈ ಟೂರ್ನಿಯಲ್ಲಿ ಒಂದು ತಂಡಕ್ಕೆ ಮಾತ್ರ ಲಾಭವಾಗುತ್ತಿದೆ ಎಂದರು. ಬಳಿಕ ಆಸ್ಟ್ರೇಲಿಯಾ, ಅದಾದ ಬಳಿಕ ಈಗ ದಕ್ಷಿಣ ಆಫ್ರಿಕಾವೂ ಒಂದೇ ತಾಣದಲ್ಲಿ ಆಡುವ ಲಾಭ ಭಾರತಕ್ಕೆ ಆಗುತ್ತಿದೆ ಎಂದು ಉರಿದುಕೊಂಡಿದ್ದರು.
ಚಾಂಪಿಯನ್ಸ್ ಟ್ರೋಫಿ ಆಯೋಜನೆ ಬಗ್ಗೆ ರೂಪುರೇಷೆ ಸಿದ್ಧಪಡಿಸಿಲು ಐಸಿಸಿ ಒಂದು ಸಭೆ ನಡೆಸಿತ್ತು. ಅಂದಿನಿಂದಲೂ ಪಾಕಿಸ್ತಾನಕ್ಕೆ ನಾವು ಬಿಲ್ ಕುಲ್ ಹೋಗಲ್ಲ ಎಂದು ಭಾರತ ಹೇಳುತ್ತಲೇ ಬಂದಿತ್ತು. ಹೀಗಾಗಿ ಭಾರತ ಆಡುವ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜನೆ ಮಾಡಬೇಕಾಗಬಹುದು ಎಂಬುದು ಅಂದಿನಿಂದಲೇ ಈ ಎಲ್ಲಾ ರಾಷ್ಟ್ರಗಳಿಗೂ ಮನದಟ್ಟಾಗಿರಬಹುದು.
ಒಂದು ವೇಳೆ ಭಾರತಕ್ಕೆ ಲಾಭವಾಗಲಿದೆ ಎಂದು ಲೆಕ್ಕಾಚಾರಗಳಿದ್ದರೆ ಅಂದೇ ನಮಗೂ ಪಾಕಿಸ್ತಾನದಲ್ಲಿ ಆಡಲು ಇಷ್ಟವಿಲ್ಲ, ನಾವೂ ದುಬೈನಲ್ಲೇ ಆಡುತ್ತೇವೆ ಎಂದಿದ್ದರೆ ಮುಗಿಯುತ್ತಿತ್ತು. ಆದರೆ ಆಗ ಪಾಕಿಸ್ತಾನದಲ್ಲಿ ಆಡಲು ನಮಗೆ ತೊಂದರೆಯಿಲ್ಲ, ತಾವು ಪಾಕಿಸ್ತಾನಕ್ಕೆ ಹೋಗಲೂ ರೆಡಿ ಎಂದು ಕುಣಿದಿದ್ದ ಈ ರಾಷ್ಟ್ರಗಳು ಈಗ ಭಾರತ ಫೈನಲ್ ಗೇರಿದ ಬಳಿಕ ಹೊಟ್ಟೆ ಉರಿ ಪಟ್ಟುಕೊಳ್ಳುತ್ತಿರುವುದೇಕೆ ಎಂಬುದೇ ಅರ್ಥವಾಗದ ವಿಚಾರ. ಅಷ್ಟಕ್ಕೂ ದುಬೈ ಭಾರತದ ತವರು ನಗರವಲ್ಲ. ಭಾರತದ ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮಾ ಹೇಳಿದಂತೆ ನಮಗೂ ಇದು ಅನ್ಯ ದೇಶದ ಪಿಚ್. ನಮ್ಮ ತವರಿನ ಅಂಕಣವಲ್ಲ. ನಮಗೂ ಈ ಅಂಕಣ ಹೊಸದು. ಅಷ್ಟಕ್ಕೂ ನಾವು ಈ ಪಿಚ್ ನಲ್ಲೇ ಅಭ್ಯಾಸ ನಡೆಸುತ್ತಿಲ್ಲ. ಎಲ್ಲರಂತೆ ನಾವೂ ಅಭ್ಯಾಸ ನಡೆಸುವುದು ಐಸಿಸಿ ಗ್ರೌಂಡ್ ನಲ್ಲಿ. ಕೇವಲ ಪಂದ್ಯವಾಡಲು ಮಾತ್ರ ಇಲ್ಲಿಗೆ ಬರುತ್ತಿದ್ದೇವೆ. ನಾವು ಆಡಿದ ಎಲ್ಲಾ ಪಂದ್ಯಗಳಲ್ಲೂ ವ್ಯತ್ಯಸ್ಥ ಪಿಚ್ ಗಳಿತ್ತು. ಆ ಪಿಚ್ ಹೇಗಿರುತ್ತದೆ ಎಂದು ನಮಗೆ ಮೊದಲೇ ಊಹೆಯೂ ಇರಲಿಲ್ಲ. ಹೀಗಾಗಿ ನಮಗೆ ಮಾತ್ರ ಲಾಭವಾಗುತ್ತಿದೆ ಎಂಬ ವಾದವೇ ಒಪ್ಪುವಂತದ್ದಲ್ಲ ಎಂದು ರೋಹಿತ್, ಗಂಭೀರ್ ಹೇಳಿದ್ದರು. ಈಗ ಭಾರತ ಫೈನಲ್ ಗೇರಿದ ಬಳಿಕವಂತೂ ಎಲ್ಲಾ ತಂಡಗಳೂ ಕುಣಿಯಲು ಬಾರದವನು ನೆಲ ಡೊಂಕು ಎಂದನಂತೆ ಎಂಬಂತೆ ಏಕತಾಣದ ಲಾಭದ ಮೇಲೆ ಗೂಬೆ ಕೂರಿಸುತ್ತಿವೆ.