ಕೊರೋನಾ ಬಳಿಕ ಕ್ರಿಕೆಟ್: ಏನೆಲ್ಲಾ ಬದಲಾವಣೆಯಾಗಿದೆ ಗೊತ್ತಾ?
ಗುರುವಾರ, 9 ಜುಲೈ 2020 (09:00 IST)
ಮುಂಬೈ: ಕೊರೋನಾ ಮಹಾಮಾರಿ ಬಂದ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಿದೆ. ಆದರೆ ಕೊರೋನಾ ಕ್ರಿಕೆಟ್ ನಲ್ಲಿ ಯಾವೆಲ್ಲಾ ಬದಲಾವಣೆ ತಂದಿದೆ ಗೊತ್ತಾ?
ಮುಖ್ಯವಾಗಿ ಕೊರೋನಾ ಬಳಿಕ ಕ್ರಿಕೆಟ್ ಗೆ ಐಸಿಸಿ ತನ್ನ ನಿಯಮದಲ್ಲಿ ಕೆಲವು ಬದಲಾವಣೆ ತಂದಿದೆ. ಅದರಲ್ಲಿ ಮುಖ್ಯವಾಗಿ ಚೆಂಡಿಗೆ ಹೊಳಪು ಮೂಡಿಸಲು ಸಲೈವಾ ಬಳಸುವಂತಿಲ್ಲ. ಇದು ವೇಗಿಗಳಿಗೆ ಸವಾಲಿನ ಕೆಲಸವಾಗಲಿದೆ.
ಇನ್ನು, ಪಂದ್ಯದ ನಡುವೆ ಆಡುವ ಬಳಗದಲ್ಲಿರುವ ಆಟಗಾರನಿಗೆ ಕೊರೋನಾ ತಗುಲಿದರೆ ಬದಲಿ ಆಟಗಾರನ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಇದುವರೆಗೆ ತಟಸ್ಥ ದೇಶದ ಅಂಪಾಯರ್ ಗಳು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇನ್ನು ಮುಂದೆ ಅತಿಥೇಯ ದೇಶದ ಅಂಪಾಯರ್ ಗಳೇ ಕಾರ್ಯನಿರ್ವಹಿಸಲಿದ್ದಾರೆ. ಅನುಭವಿ ಅಂಪಾಯರ್ ಗಳ ಅನುಪಸ್ಥಿತಿಯಲ್ಲಿ ಫಲಿತಾಂಶ ನೀಡುವಾಗ ಹೆಚ್ಚು ಕಮ್ಮಿಯಾದರೂ ಆಟಗಾರರಿಗೆ ತೊಂದರೆಯಾಗದಿರಲೆಂದು ಎರಡರ ಬದಲು ಮೂರು ಬಾರಿ ಔಟ್ ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇದಲ್ಲದೆ, ಆಟಗಾರರು ವಿಕೆಟ್ ಬಿದ್ದಾಗ ಸೆಲೆಬ್ರೇಷನ್ ಮಾಡುವಾಗ ಮೈ ಕೈ ಮುಟ್ಟದೇ ಸೆಲೆಬ್ರೇಷನ್ ಮಾಡುವುದು, ಹಸ್ತಾಲಾಘವದ ಬದಲು ಮೊಣಕೈ ತಾಗಿಸುವುದು ಇತ್ಯಾದಿ ಇತರ ಹೊಸ ಪದ್ಧತಿಗಳು ಕ್ರಿಕೆಟ್ ಪಂದ್ಯಗಳಲ್ಲಿ ಕಂಡುಬರಲಿದೆ.