ಏಕದಿನ ವಿಶ್ವಕಪ್: ಸೆಮಿಫೈನಲ್ ರೇಸ್ ಗೆ ಸೇರಿಕೊಂಡ ಅಫ್ಘಾನಿಸ್ತಾನ
ಮಂಗಳವಾರ, 31 ಅಕ್ಟೋಬರ್ 2023 (09:30 IST)
ಪುಣೆ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ದುರ್ಬಲ ತಂಡವೆಂಬ ಹಣೆಪಟ್ಟಿ ಹೊತ್ತು ಕಣಕ್ಕಿಳಿದ ಅಫ್ಘಾನಿಸ್ತಾನ ತಂಡ ಈಗ ತಾನು ಅದೃಷ್ಟದ ಮೇಲೆ ಗೆಲ್ಲುತ್ತಿಲ್ಲ, ತನ್ನಲ್ಲೂ ಟ್ಯಾಲೆಂಟ್ ಇದೆ ಎಂದು ತೋರಿಸಿಕೊಳ್ಳುತ್ತಿದೆ.
ಇದುವರೆಗೆ ಆಡಿದ 6 ಪಂದ್ಯಗಳಿಂದ ಅಫ್ಘಾನಿಸ್ತಾನ ಮೂರನೇ ಗೆಲುವು ಸಂಪಾದಿಸಿದೆ. ಶ್ರೀಲಂಕಾ ವಿರುದ್ಧದ ನಿನ್ನೆಯ ಪಂದ್ಯವನ್ನು ಅಫ್ಘಾನ್ ತಂಡ 7 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 241 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಕೇವಲ 3 ವಿಕೆಟ್ ಕಳೆದುಕೊಂಡು 242 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು.
ಈ ಗೆಲುವಿನೊಂದಿಗೆ ಅಫ್ಘಾನ್ ಸೆಮಿಫೈನಲ್ ಆಸೆ ಜೀವಂತವಾಗಿದೆ. ಅಫ್ಘಾನಿಸ್ತಾನ ಇನ್ನು ಮೂರು ಪಂದ್ಯಗಳನ್ನು ಆಡಲಿದೆ. ಈ ಮೂರು ಪಂದ್ಯಗಳನ್ನು ಗೆದ್ದರೆ ಸೆಮಿಫೈನಲ್ ಸೀಟ್ ಸಿಕ್ಕರೂ ಅಚ್ಚರಿಯಿಲ್ಲ. ಅಫ್ಘಾನಿಸ್ತಾನ ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಮಿಂಚುತ್ತಿರುವುದು ನೋಡಿದರೆ ಸೆಮಿಫೈನಲ್ ನಲ್ಲಿ ಅಚ್ಚರಿಯ ಫಲಿತಾಂಶ ನೀಡುವ ದೈತ್ಯ ಸಂಹಾರಿ ತಂಡವಾಗುವ ಸಾಧ‍್ಯತೆಯೂ ಇಲ್ಲದಿಲ್ಲ.