ಏಕದಿನ ವಿಶ್ವಕಪ್: ಪಾಕ್ ವಿರುದ್ಧ ಗೆಲುವಿನ ಜೊತೆಗೆ ಅಗ್ರ ಸ್ಥಾನಕ್ಕೇರಿದ ಟೀಂ ಇಂಡಿಯಾ
ನಾಯಕ ರೋಹಿತ್ ಶರ್ಮಾ ಕೂದಲೆಳೆಯಲ್ಲಿ ಪಾಕ್ ವಿರುದ್ಧ ಮತ್ತೊಂದು ಶತಕ ಬಾರಿಸುವ ಅವಕಾಶ ಮಿಸ್ ಮಾಡಿಕೊಂಡರು. ಇದಕ್ಕೆ ಮೊದಲು ಪಾಕಿಸ್ತಾನ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಆಲೌಟ್ ಆಯಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ ಕೇವಲ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸುವ ಮೂಲಕ ಈ ವಿಶ್ವಕಪ್ ಕೂಟದ ಮೂರನೇ ಜಯ ತನ್ನದಾಗಿಸಿಕೊಂಡಿತು. ಭಾರತದ ಪರ ನಾಯಕ ರೋಹಿತ್ ಶರ್ಮಾ ಮತ್ತೊಂದು ವೇಗದ ಶತಕ ಗಳಿಸುತ್ತಾರೆ ಎಂಬುದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ರೋಹಿತ್ ದುರದೃಷ್ಟವಶಾತ್ 86 ರನ್ ಗಳಿಗೆ ಔಟಾಗಿ ನಿರಾಸೆ ಅನುಭವಿಸಿದರು. ಆದರೆ ಕೊನೆಯವರೆಗೂ ಅಜೇಯರಾಗುಳಿದ ಶ್ರೇಯಸ್ ಅಯ್ಯರ್ 53 ರನ್ ಗಳಿಸಿದರು. ವಿರಾಟ್ ಕೊಹ್ಲಿ ಮತ್ತು ಶುಬ್ಮನ್ ಗಿಲ್ ತಲಾ 16 ರನ್ ಗಳಿಸಿ ಔಟಾದರು. ಕೆಎಲ್ ರಾಹುಲ್ ಅಜೇಯ 19 ರನ್ ಗಳಿಸಿದರು. ಪಾಕ್ ಪರ ವೇಗಿ ಶಾಹಿನ್ ಅಫ್ರಿದಿ 2, ಹಸನ್ ಅಲಿ 1 ವಿಕೆಟ್ ತಮ್ಮದಾಗಿಸಿಕೊಂಡರು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.