ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ಮುಗಿದಿದ್ದು ಇದೀಗ ಟಿ20 ಸರಣಿ ಪರ್ವ ಶುರುವಾಗಿದೆ. ಇದರ ನಡುವೆ ಮತ್ತೆ ತಂಡದ ಮ್ಯಾನೇಜ್ ಮೆಂಟ್ ಗೆ ಹರ್ಷಿತ್ ರಾಣಾ ತಲೆನೋವು ಶುರುವಾಗಿದೆ.
ಏಕದಿನ ಸರಣಿಯಲ್ಲಿ ಅರ್ಷ್ ದೀಪ್ ಸಿಂಗ್ ಗೆ ಎರಡು ಪಂದ್ಯಗಳಲ್ಲಿ ವಿಶ್ರಾಂತಿ ನೀಡಿ ಮೂರೂ ಪಂದ್ಯಗಳಲ್ಲಿ ಹರ್ಷಿತ್ ರಾಣಾರನ್ನು ಆಡಿಸಲಾಗಿತ್ತು. ಇದು ಹಲವರ ಟೀಕೆಗೂ ಗುರಿಯಾಗಿತ್ತು. ಗಂಭೀರ್ ದತ್ತು ಪುತ್ರ ಹರ್ಷಿತ್ ರಾಣಾ ಹೇಳಿಕೊಳ್ಳುವ ಸಾಧನೆ ಮಾಡದೇ ಇದ್ದರೂ ಮೂರೂ ಮಾದರಿಯಲ್ಲಿ ಅವಕಾಶ ನೀಡುತ್ತಿರುವುದು ಯಾಕೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದರು.
ಇದೀಗ ಟಿ20 ಸರಣಿಯಲ್ಲೂ ಹರ್ಷಿತ್ ರಾಣಾ ಆಯ್ಕೆಯಾಗಿದ್ದಾರೆ. ಆದರೆ ವೇಗದ ಬೌಲಿಂಗ್ ವಿಭಾಗದಲ್ಲಿ ಅನುಭವಿ ಜಸ್ಪ್ರೀತ್ ಬುಮ್ರಾ, ಟಿ20 ಸ್ಪೆಷಲಿಸ್ಟ್ ಅರ್ಷ್ ದೀಪ್ ಸಿಂಗ್ ಇದ್ದಾರೆ. ಇದರ ಜೊತೆಗೆ ಹಾರ್ದಿಕ್ ಪಾಂಡ್ಯ ಮೂರನೇ ವೇಗಿಯಾಗಿದ್ದಾರೆ.
ಟಿ20 ಮಾದರಿಯಲ್ಲೂ ಗಂಭೀರ್, ಅರ್ಷ್ ದೀಪ್ ಸಿಂಗ್ ರನ್ನು ಹೊರಗಿಟ್ಟು ಹರ್ಷಿತ್ ಗೆ ಸ್ಥಾನ ನೀಡುತ್ತಾರಾ ಎಂಬ ಕುತೂಹಲ ಎಲ್ಲರಲ್ಲಿದೆ. ಒಂದು ವೇಳೆ ಟಿ20 ಮಾದರಿಯಲ್ಲಿ ಅರ್ಷ್ ದೀಪ್ ಸಿಂಗ್ ರನ್ನು ಹೊರಗಿಟ್ಟರೆ ಅದು ತಂಡಕ್ಕೆ ದೊಡ್ಡ ಹೊಡೆತ ನೀಡಲಿದೆ. ಹೀಗಾಗಿ ಮತ್ತೆ ಟೀಂ ಇಂಡಿಯಾಗೆ ಹರ್ಷಿತ್ ರಾಣಾ ತಲೆನೋವು ಶುರುವಾಗಿದೆ.