Womens World Cup:ಧಾರಾಕಾರ ಮಳೆಗೆ ಕೊಚ್ಚಿ ಹೋದ ಭಾರತ–ಬಾಂಗ್ಲಾದೇಶ ಪಂದ್ಯ

Sampriya

ಭಾನುವಾರ, 26 ಅಕ್ಟೋಬರ್ 2025 (23:01 IST)
ಮುಂಬೈ: ಇಲ್ಲಿನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ  ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯ ಮಳೆಗೆ ಕೊಚ್ಚಿ ಹೋಗಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ. 

ಮಳೆಯಿಂದಾಗಿ ಪಂದ್ಯವನ್ನು 27 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಬಾಂಗ್ಲಾದೇಶ 27 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 119 ರನ್ ಪೇರಿಸಿದೆ. ಈ ಮೂಲಕ ಭಾರತ ತಂಡಕ್ಕೆ 120 ರನ್ ಗುರಿ ನೀಡಿತು. 

ಶರ್ಮಿನ್ ಅಖ್ತರ್ 36, ಸೋಭನಾ ಮೊಸ್ತಾರಿ 26 ರನ್ ಗಳಿಸಿದ್ದು ಬಿಟ್ಟರೆ ಬಾಂಗ್ಲಾದೇಶದ ಪರ ಬೇರಾವ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಸ್ಪಿನ್ನರ್ ರಾಧಾ ಯಾದವ್ ಅವರು 30 ರನ್ ನೀಡಿ 3 ವಿಕೆಟ್ ಉರುಳಿಸಿದರೆ, ಶ್ರೀ ಚರಣ್ 25 ರನ್‌ಗೆ 2 ವಿಕೆಟ್ ಪಡೆದು ಅತ್ಯುತ್ತಮ ಬೌಲರ್ ಎನಿಸಿದರು.

ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 8.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 57 ರನ್‌ ಗಳಿಸಿ ಗೆಲುವಿನತ್ತ ದಾಪುಗಾಲು ಹಾಕಿತ್ತು. ಮತ್ತೆ ಮಳೆ ಸುರಿದ ಕಾರಣ ಪಂದ್ಯ ರದ್ದು ಮಾಡಲಾಯಿತು. ಈ ಪಂದ್ಯದ ಫೀಲ್ಡಿಂಗ್‌ ವೇಳೆ ಭಾರತದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್‌ ಗಾಯಗೊಂಡಿದ್ದು, ಭಾರತಕ್ಕೆ ಆಘಾತವಾಗಿದೆ.

ಸ್ಮೃತಿ ಮಂದಾನ ಮತ್ತು ಅಮನ್‌ಜ್ಯೋತ್‌ ಭಾರತದ ಇನಿಂಗ್ಸ್‌ ಆರಂಭಿಸಿದರು. ಮಂದಾನ ಔಟಾಗದೇ 34 ರನ್‌ ಗಳಿಸಿದರೆ, ಅವರಿಗೆ ಅಮನ್‌ಜ್ಯೋತ್‌ (15) ಸಾಥ್‌ ನೀಡಿದರು.  

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಇದೇ 30ರಂದು ಮಹತ್ವದ ಸೆಮಿಫೈನಲ್ ಪಂದ್ಯ ಆಡುವ ಮುನ್ನ ಭಾರತ ತಂಡ ತನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಲು ಕೊನೆಯ ಅವಕಾಶ ಒದಗಿಸಿತ್ತು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ