ಲೇಟಾಗಿ ಬರುವವರಿಗೆ ಟೀಂ ಇಂಡಿಯಾದಲ್ಲಿ ಧೋನಿ ಕೊಡುತ್ತಿದ್ದ ಶಿಕ್ಷೆಯೇನು ಗೊತ್ತಾ?

ಗುರುವಾರ, 16 ಮೇ 2019 (08:32 IST)
ಮುಂಬೈ: ಟೀಂ ಇಂಡಿಯಾ ನಾಯಕರಾಗಿ ಯಶಸ್ಸಿನ ಉತ್ತುಂಗಕ್ಕೇರಿದ್ದ ಧೋನಿ ತಾವು ನಾಯಕರಾಗಿದ್ದಾಗ ಪ್ರಾಕ್ಟೀಸ್ ಗೆ ಲೇಟಾಗಿ ಬರುವವರಿಗೆ ವಿಶಿಷ್ಟ ಶಿಕ್ಷೆ ನೀಡುತ್ತಿದ್ದರಂತೆ.


ಈ ಬಗ್ಗೆ ಭಾರತದ ಮಾಜಿ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ. ಅಭ್ಯಾಸಕ್ಕೆ ಸಮಯಕ್ಕೆ ಸರಿಯಾಗಿ ಬರದ ಆಟಗಾರರಿಗೆ ಏನಾದರೂ ಶಿಕ್ಷೆ ಕೊಡೋಣವೇ ಎಂದು ಮೊದಲು ಟೆಸ್ಟ್ ತಂಡದಲ್ಲಿ ಚರ್ಚೆಯಾಯಿತು. ಆಗ ಟೆಸ್ಟ್ ತಂಡಕ್ಕೆ ಅನಿಲ್ ಕುಂಬ್ಳೆ ನಾಯಕರಾಗಿದ್ದರು. ಏಕದಿನಕ್ಕೆ ಧೋನಿ ನಾಯಕರಾಗಿದ್ದರು.

ಟೆಸ್ಟ್ ತಂಡದಲ್ಲಿ ಲೇಟಾಗಿ ಬರುವ ಆಟಗಾರರಿಗೆ 10 ಸಾವಿರ ರೂ. ದಂಡ ವಿಧಿಸೋಣ ಎಂದು ನಾಯಕ ಕುಂಬ್ಳೆ ಸಲಹೆ ನೀಡಿದರು. ಅದರಂತೆ ಟೆಸ್ಟ್ ತಂಡದಲ್ಲಿ ಆ ಶಿಕ್ಷೆ ಜಾರಿಯಾಯಿತು. ನಂತರ ಏಕದಿನ ತಂಡದಲ್ಲೂ ಇದೇ ಶಿಕ್ಷೆ ಜಾರಿಗೊಳಿಸಲು ನಿರ್ಧರಿಸಲಾಯಿತು. ಆಗ ನಾಯಕ ಧೋನಿ ಅದಕ್ಕೆ ಸಣ್ಣ ಟ್ವಿಸ್ಟ್ ನೀಡಿದರು.

ಲೇಟಾಗಿ ಬರುವ ಆಟಗಾರನಿಗೆ ಮಾತ್ರವಲ್ಲ, ಒಬ್ಬ ಆಟಗಾರ ಲೇಟ್ ಆದರೆ ಎಲ್ಲಾ ಆಟಗಾರರೂ 10 ಸಾವಿರ ದಂಡ ತೆರಬೇಕು ಎಂದು ಧೋನಿ ಸಲಹೆ ನೀಡಿದರು. ಅದರಂತೆ ಆ ಶಿಕ್ಷೆ ಜಾರಿಯಾಯಿತು. ಆ ಬಳಿಕ ಯಾರೂ ಕೂಡಾ ಏಕದಿನ ತಂಡದಲ್ಲಿ ಪ್ರಾಕ್ಟೀಸ್ ಗೆ ಲೇಟ್ ಆಗಿ ಬರುತ್ತಿರಲಿಲ್ಲ ಎಂದು ಪ್ಯಾಡಿ ತಮ್ಮ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ