ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯ ಹೃದಯವಂತಿಕೆ ಬಗ್ಗೆ ಅನೇಕ ವಿಚಾರಗಳನ್ನು ಕೇಳಿದ್ದೇವೆ. ಇದೀಗ ಅಂತಹದ್ದೇ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ.
ಧೋನಿ ತಾವು ಭಾರತದ ಪರ ಆಡುತ್ತಿದ್ದಾಗ ತಮ್ಮ ಬ್ಯಾಟ್ ಗೆ ಬಿಎಎಸ್ ಕಂಪನಿಯ ಸ್ಟಿಕ್ಕರ್ ಅಂಟಿಸುತ್ತಿದ್ದರು. ಈ ರೀತಿ ಯಾವುದೇ ಸ್ಟಾರ್ ಕ್ರಿಕೆಟಿಗರೂ ತಮ್ಮ ಬ್ಯಾಟ್ ಗೆ ಅಂಟಿಸುವ ಸ್ಟಿಕ್ಕರ್ ಗೆ ಕೋಟ್ಯಾಂತರ ರೂಪಾಯಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಆದರೆ ಧೋನಿ ತಮ್ಮ ವೃತ್ತಿ ಜೀವನದುದ್ದಕ್ಕೂ ಉಚಿತವಾಗಿ ಸ್ಟಿಕ್ಕರ್ ಹಾಕಿಸಿಕೊಂಡಿದ್ದರಂತೆ! ಈ ವಿಚಾರವನ್ನು ಸ್ವತಃ ಬಿಎಎಸ್ ಕಂಪನಿ ಮಾಲಿಕ ಸೊಮಿ ಕೊಹ್ಲಿ ಬಹಿರಂಗಪಡಿಸಿದ್ದು, ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಧೋನಿ ಎಷ್ಟು ಹಣ ಕೊಡಬೇಕು ಎಂದು ಹೇಳಲಿಲ್ಲ. ನಿಮ್ಮ ಸ್ಟಿಕ್ಕರ್ ನ್ನು ಅಂಟಿಸಿ, ಅದನ್ನು ಜಗತ್ತಿನ ಉದ್ದಗಲಕ್ಕೂ ಕಳುಹಿಸೋಣ ಎಂದಿದ್ದರು. ನಾನು ಅವರನ್ನು ಕನ್ವಿನ್ಸ್ ಮಾಡಲು ಯತ್ನಿಸಿದೆ. ನೀವು ದೊಡ್ಡ ಮೊತ್ತದ ಒಪ್ಪಂದ ಕಳೆದುಕೊಳ್ಳುತ್ತಿದ್ದೀರಿ ಎಂದೆ. ಕೋಟ್ಯಾಂತರ ರೂಪಾಯಿ ಮೊತ್ತ ಗುತ್ತಿಗೆ ಅವರು ಕೈ ಬಿಟ್ಟಿದ್ದರು. ನಾನು ಅವರ ಪತ್ನಿ ಸಾಕ್ಷಿ, ತಂದೆ, ತಾಯಿ ಎಲ್ಲರಿಗೂ ಮನವರಿಕೆ ಮಾಡಿದ್ದೆ. ಅಷ್ಟೇ ಅಲ್ಲ, ಆದರೆ ಅವರು ಯಾರ ಮಾತೂ ಕೇಳಲಿಲ್ಲ. ಇದು ನನ್ನ ನಿರ್ಧಾರ ಎಂದು ಬಿಟ್ಟರು ಎಂದು ಸೊಮಿ ಕೊಹ್ಲಿ ಹೇಳಿರುವ ವಿಡಿಯೋ ಈಗ ವೈರಲ್ ಆಗಿದೆ.
ಹೀಗೆ ತಮ್ಮ ವೃತ್ತಿ ಜೀವನದುದ್ದಕ್ಕೂ ಧೋನಿ ಉಚಿತವಾಗಿ ಬ್ಯಾಟ್ ಮೇಲೆ ಬ್ರ್ಯಾಂಡ್ ನೇಮ್ ಹಾಕಿಸಿಕೊಳ್ಳುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಇತ್ತೀಚೆಗೆ ಧೋನಿ ತಮ್ಮ ಗೆಳೆಯ ಪರಂಜಿತ್ ಸಿಂಗ್ ಅವರ ಕ್ರೀಡಾ ಪರಿಕರಗಳ ಶಾಪ್ ಹೆಸರಿನ ಸ್ಟಿಕ್ಕರ್ ಅಂಟಿಸಿದ ಬ್ಯಾಟ್ ನಿಂದ ಐಪಿಎಲ್ ಗೆ ಸಿದ್ಧತೆ ನಡೆಸುವ ಫೋಟೋ ವೈರಲ್ ಆಗಿತ್ತು. ಪರಂಜಿತ್ ಧೋನಿ ಪರಮಾಪ್ತ ಗೆಳೆಯನಾಗಿದ್ದು, ಕಷ್ಟದ ದಿನಗಳಲ್ಲಿ ಸಾಥ್ ನೀಡಿದ ಗೆಳೆಯನ ಅಂಗಡಿ ಹೆಸರನ್ನೇ ತಮ್ಮ ಬ್ಯಾಟ್ ಮೇಲೆ ಬರೆಯಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಬ್ಯಾಟ್ ಸ್ಟಿಕ್ಕರ್ ವಿಚಾರಕ್ಕೆ ಧೋನಿ ಎಲ್ಲರ ಹೃದಯ ಗೆದ್ದಿದ್ದಾರೆ.