ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿಯ ಪೈಕಿ ಮೂರನೇ ಟೆಸ್ಟ್ ಪಂದ್ಯ ಇಂದಿನಿಂದ ರಾಜ್ ಕೋಟ್ ಮೈದಾನದಲ್ಲಿ ನಡೆಯಲಿದೆ.
ಟೀಂ ಇಂಡಿಯಾಕ್ಕೆ ಬ್ಯಾಟಿಂಗ್ ನಲ್ಲಿ ಪ್ರಮುಖ ಆಟಗಾರರ ಅನುಪಸ್ಥಿತಿಯೇ ದೊಡ್ಡದಾಗಿ ಕಾಡುತ್ತಿದೆ. ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ತಂಡದಲ್ಲಿಲ್ಲ. ಇದು ಮಧ‍್ಯಮ ಕ್ರಮಾಂಕಕ್ಕೆ ದೊಡ್ಡ ಹೊಡೆತ ಬೀಳಲಿದೆ. ಅವರ ಸ್ಥಾನದಲ್ಲಿ ಸರ್ಫರಾಜ್ ಖಾನ್, ಧ್ರುವ ಜ್ಯುರೆಲ್ ನಂತಹ ಹೊಸಬರು ಅವಕಾಶ ಪಡೆಯಲಿದ್ದಾರೆ.
ದೇಶೀಯ ಕ್ರಿಕೆಟ್ ನಲ್ಲಿ ಮಿಂಚಿದ್ದ ಸರ್ಫರಾಜ್ ಖಾನ್ ರಾಷ್ಟ್ರೀಯ ತಂಡದಲ್ಲಿ ಒಂದು ಅವಕಾಶಕ್ಕಾಗಿ ಕಾದು ಕುಳಿತಿದ್ದರು. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಸ್ಥಾನದಲ್ಲಿ ಅವರಿಗೆ ಅವಕಾಶ ಸಿಗಲಿದೆ. ಇನ್ನು, ವಿಕೆಟ್ ಕೀಪರ್ ಆಗಿ ಕಳೆದ ಎರಡೂ ಪಂದ್ಯಗಳಲ್ಲಿ ವಿಫಲರಾಗಿರುವ ಕೆಎಸ್ ಭರತ್ ಸ್ಥಾನಕ್ಕೆ ಧ್ರುವ ಜ್ಯುರೆಲ್ ಚೊಚ್ಚಲ ಅವಕಾಶ ಪಡೆಯಲಿದ್ದಾರೆ. ಈ ಇಬ್ಬರಿಗೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ವೇದಿಕೆ ಸಿಕ್ಕಂತಾಗಿದೆ.
ಬೌಲಿಂಗ್ ನಲ್ಲಿ ಅನುಭವಿ ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಕಳೆದ ಎರಡೂ ಪಂದ್ಯಗಳಲ್ಲಿ ಸ್ಪಿನ್ ಪಿಚ್ ಆಗಿದ್ದರೂ ಐದು ವಿಕೆಟ್ ಗಳ ಗೊಂಚಲು ಪಡೆಯುವ ಮೂಲಕ ಬುಮ್ರಾ ತಾವೆಂಥಾ ಪ್ರತಿಭಾವಂತ ಎಂದು ಸಾಬೀತುಪಡಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಕೂಡಾ ಅವರಿಗೆ ಸಾಥ್ ನೀಡುತ್ತಿರುವುದು ಪ್ಲಸ್ ಪಾಯಿಂಟ್. ಮತ್ತೊಬ್ಬ ಸ್ಪಿನ್ ಆಲ್ ರೌಂಡರ್ ರವೀಂದ್ರ ಜಡೇಜಾಗೆ ತವರಿನ ಅಂಕಣದಲ್ಲಿ ಆಡುವ ಸಂಭ್ರಮ. ಹೀಗಾಗಿ ಈ ಮೂವರೂ ಅನುಭವಿಗಳ ಮೇಲೆ ಅಪಾರ ನಿರೀಕ್ಷೆಯಿದೆ.
ಪಿಚ್ ಪರಿಸ್ಥಿತಿ ನೋಡಿದರೆ ರಾಜ್ ಕೋಟ್ ನಲ್ಲಿ ಸ್ಪಿನ್ನರ್ ಗಳು ಮತ್ತು ಬ್ಯಾಟಿಗರು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ. ಸದ್ಯದ ಪರಿಸ್ಥಿತಿ ನೋಡಿದರೆ ವೇಗಿಗಳ ಪಾತ್ರ ಅಷ್ಟೊಂದು ಇರದು. ರಾಜ್ ಕೋಟ್ ನ ಅತಿಯಾದ ಬಿಸಿಲಿನಲ್ಲಿ ಬ್ಯಾಟಿಂಗ್ ಮಾಡುವುದೂ ಸವಾಲಿನ ಕೆಲಸವಾಗಲಿದೆ. ಎಂದಿನಂತೆ ಟಾಸ್ ನಿರ್ಣಾಯಕವಾಗಲಿದೆ. ಈ ಪಂದ್ಯ ಬೆಳಿಗ್ಗೆ 9.30 ಕ್ಕೆ ಆರಂಭವಾಗಲಿದ್ದು, ಜಿಯೋ ಸಿನಿಮಾ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.