ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಕೊನೆಯ ಐಪಿಎಲ್ ಪಂದ್ಯವಾಡಿದ ಆರ್ ಸಿಬಿ ವಿಕೆಟ್ ಕೀಪರ್ ಬ್ಯಾಟಿಗ ದಿನೇಶ್ ಕಾರ್ತಿಕ್ ಗೆ ಭಾವುಕ ವಿದಾಯ ನೀಡಲಾಗಿದೆ. ಕೊನೆಯ ಪಂದ್ಯವಾಡಿದ ಡಿಕೆ ಬಾಸ್ ಗೆ ಅಭಿಮಾನಿಗಳು ಎದ್ದು ನಿಂತು ಗೌರವ ನೀಡಿದ್ದಾರೆ.
2008 ರಲ್ಲಿಯೇ ಅವರ ಐಪಿಎಲ್ ಜೀವನ ಆರಂಭವಾಗಿತ್ತು. 2015 ರಲ್ಲಿ ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿದ್ದರು. ಪಾರ್ಥಿವ್ ಪಟೇಲ್ ಬಳಿಕ ಆರ್ ಸಿಬಿಯ ಖಾಯಂ ವಿಕೆಟ್ ಕೀಪರ್ ಬ್ಯಾಟಿಗರಾದರು. 38 ವರ್ಷದ ದಿನೇಶ್ ಕಾರ್ತಿಕ್ ಅತ್ಯುತ್ತಮ ಫಿನಿಶರ್ ಆಗಿ ಅಭಿಮಾನಿಗಳಿಂದ ಡಿಕೆ ಬಾಸ್ ಎಂದೇ ಕರೆಯಿಸಿಕೊಳ್ಳುತ್ತಿದ್ದರು. ಈ ಐಪಿಎಲ್ ನಲ್ಲೂ ಅವರು ಕೆಲವೊಂದು ಸ್ಮರಣೀಯ ಇನಿಂಗ್ಸ್ ಆಡಿದ್ದಾರೆ.
ಇದುವರೆಗೆ ಒಟ್ಟು 257 ಐಪಿಎಲ್ ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್ 4,842 ರನ್ ಗಳಿಸಿದ್ದಾರೆ. ಒಟ್ಟು 22 ಅರ್ಧಶತಕ ಸಿಡಿಸಿರುವ ಡಿಕೆ ಇದುವರೆಗೆ ಶತಕ ಸಿಡಿಸಿಲ್ಲ. ಅಜೇಯ 97 ರನ್ ಗಳಿಸಿರುವುದು ಅವರ ಗರಿಷ್ಠ ರನ್ ದಾಖಲೆಯಾಗಿದೆ. ವಿಕೆಟ್ ಕೀಪರ್ ಆಗಿ 145 ಕ್ಯಾಚ್, 15 ರನೌಟ್ ಮತ್ತು 37 ಸ್ಟಂಪ್ ಔಟ್ ಮಾಡಿದ ದಾಖಲೆ ಅವರದ್ದಾಗಿದೆ.
ಆರ್ ಸಿಬಿಯ ಅವಿಭಾಜ್ಯ ಅಂಗವಾಗಿದ್ದ ದಿನೇಶ್ ಕೊನೆಯ ಪಂದ್ಯವಾಡಿ ಪೆವಿಲಿಯನ್ ಗೆ ಮರಳುವಾಗ ಆರ್ ಸಿಬಿ ಆಟಗಾರರು ಅವರಿಗೆ ಗಾರ್ಡ್ ಆಫ್ ಆನರ್ ಗೌರವ ನೀಡಿ ಬೀಳ್ಕೊಟ್ಟರು. ಪ್ರೇಕ್ಷಕರೂ ಎದ್ದು ನಿಂತು ಗೌರವ ಸೂಚಿಸಿದರು. ಈ ವೇಳೆ ವಿರಾಟ್ ಕೊಹ್ಲಿ ಭಾವುಕರಾಗಿ ಕಾರ್ತಿಕ್ ರನ್ನು ತಬ್ಬಿಕೊಂಡರು. ವಿಶೇಷವೆಂದರೆ ರಾಜಸ್ಥಾನ್ ರಾಯಲ್ಸ್ ಆಟಗಾರರೂ ಡಿಕೆಗೆ ಗೌರವ ಸೂಚಿಸಿದರು. ಕೊನೆಯಲ್ಲಿ ಪ್ರೇಕ್ಷಕರತ್ತ ತಮ್ಮ ಗ್ಲೌಸ್ ಎತ್ತಿ ತೋರಿಸುತ್ತಾ ಅವರ ವಂದನೆ ಸ್ವೀಕರಿಸಿ ಭಾವುಕರಾಗಿ ಕೊನೆಯ ಬಾರಿಗೆ ಡಿಕೆ ಪೆವಿಲಿಯನ್ ಗೆ ಹೆಜ್ಜೆ ಹಾಕಿದರು.