ಐಪಿಎಲ್ 2024: ಹೊಸ ಅಧ್ಯಾಯದಲ್ಲೂ ಆರ್ ಸಿಬಿಗೆ ಕಪ್ ಇಲ್ಲ

Krishnaveni K

ಗುರುವಾರ, 23 ಮೇ 2024 (08:30 IST)
Photo Courtesy: X
ಅಹಮ್ಮದಾಬಾದ್: ಐಪಿಎಲ್ 2024 ರಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ ಗಳ ಸೋಲು ಅನುಭವಿಸಿದ ಆರ್ ಸಿಬಿ ಮತ್ತೊಮ್ಮೆ ಕಪ್ ಇಲ್ಲದೇ ನಿರಾಸೆ ಅನುಭವಿಸಿದೆ. ಈ ಬಾರಿ ಆರ್ ಸಿಬಿಯ ಹೊಸ ಅಧ್ಯಾಯ ಎಂದು ಟೂರ್ನಿ ಆರಂಭಿಸಿದ ತಂಡಕ್ಕೆ ಮತ್ತೆ ನಿರಾಸೆಯೇ ಗತಿಯಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿಗೆ ಪ್ರಮುಖ ಬ್ಯಾಟಿಗರು ಕೈಕೊಟ್ಟರು. ಜೊತೆಗೆ ಸ್ಲೋ ಪಿಚ್, ಟಾಸ್ ಕೂಡಾ ಎದುರಾಳಿ ಪರವಾಗಿ ಬಿತ್ತು. ಇದರಿಂದಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಅಹಮ್ಮದಾಬಾದ್ ನಿಧಾನಗತಿಯ ಪಿಚ್ ಗೆ ಹೆಸರು ವಾಸಿಯಾಗಿದ್ದು ಇಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡವರೇ ಗೆಲ್ಲುವ ಫೇವರಿಟ್ ತಂಡವಾಗಿರುತ್ತದೆ. ಅದರಂತೆ ರಾಜಸ್ಥಾನ್ ಕೂಡಾ ಆರ್ ಸಿಬಿಯನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಲು ಯಶಸ್ವಿಯಾಯಿತು. ವಿರಾಟ್ ಕೊಹ್ಲಿ 33 ರನ್ ಗಳಿಸಿದ್ದರೆ ರಜತ್ ಪಟಿದಾರ್ 34 ಗಳಿಸಿದರು. ಕೊನೆಯಲ್ಲಿ ಲೊಮ್ರೋರ್ 17 ಎಸೆತಗಳಿಂದ 32 ರನ್ ಗಳಿಸಿದ್ದರಿಂದ ತಂಡದ ಸ್ಕೋರ್ 170 ರವರೆಗೆ ತಲುಪಿತು. ರಾಜಸ್ಥಾನ್ ಪರ ಆವೇಶ್ ಖಾನ್ 3 ಕಬಳಿಸಿದರು. ರವಿಚಂದ್ರನ್ ಅಶ್ವಿನ್ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಕ್ಯಾಮರೂನ್ ಗ್ರೀನ್ ವಿಕೆಟ್ ಗಳನ್ನು ಒಂದರ ಹಿಂದೊಂದರಂತೆ ಕಿತ್ತಿದ್ದು ಆರ್ ಸಿಬಿಗೆ ದೊಡ್ಡ ಹೊಡೆತ ನೀಡಿತು.

ಈ ಮೊತ್ತ ಬೆನ್ನತ್ತಿದ ರಾಜಸ್ಥಾನ್ 19 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಎರಡನೇ ಕ್ವಾಲಿಫೈಯರ್ ಗೆ ಅರ್ಹತೆ ಪಡೆಯಿತು. ಯಶಸ್ವಿ ಜೈಸ್ವಾಲ್ 45, ರಿಯಾನ್ ಪರಾಗ್ 36, ಹೆಟ್ಮೈರ್ 26 ರನ್ ಗಳಿಸಿದರು. ಈ ಸೋಲಿನೊಂದಿಗೆ ಆರ್ ಸಿಬಿ ಮತ್ತೊಮ್ಮೆ ಎಲಿಮಿನೇಟರ್ ಹಂತದಲ್ಲೇ ಮುಗ್ಗರಿಸಿ ಮನೆಗೆ ನಡೆಯಿತು. ಈ ಬಾರಿ ಕಪ್ ನಮ್ದೇ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆಯಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ