ಫಾಲೋ ಆನ್ ಭೀತಿಯಲ್ಲಿರುವ ಶ್ರೀಲಂಕಾಕ್ಕೆ ಮಾಜಿ ನಾಯಕನೇ ಆಸರೆ!
ಶುಕ್ರವಾರ, 28 ಜುಲೈ 2017 (09:39 IST)
ಗಾಲೆ: ಭಾರತದ ಬೃಹತ್ ಮೊತ್ತ ನೋಡಿಯೇ ಶ್ರೀಲಂಕಾ ಮಾನಸಿಕವಾಗಿ ಕುಸಿದಿರಬೇಕು. ಹೀಗಾಗಿ ಪ್ರಥಮ ಟೆಸ್ಟ್ ನಲ್ಲಿ ಕೇವಲ 154 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಫಾಲೋ ಆನ್ ಭೀತಿಗೆ ಸಿಲುಕಿದೆ.
ಸದ್ಯಕ್ಕೆ ಶ್ರೀಲಂಕಾ ಫಾಲೋ ಆನ್ ತಪ್ಪಿಸಲು ಇನ್ನೂ 247 ರನ್ ಗಳಿಸಬೇಕು. ಅದು ಉಳಿದ ಐದು ವಿಕೆಟ್ ಗಳಿಂದ. ಆ ಪೈಕಿ ಅಸೇಲ ಗುಣರತ್ನೆ ಗಾಯಗೊಂಡಿರುವುದರಿಂದ ನಾಲ್ಕು ಮಂದಿ ಬ್ಯಾಟ್ಸ್ ಮನ್ ಈ ರನ್ ಗಳಿಸಬೇಕಾಗಿದೆ.
ಶ್ರೀಲಂಕಾಕ್ಕಿರುವ ಏಕೈಕ ಆಸರೆ ಮಾಜಿ ನಾಯಕ ಆಂಜಲೋ ಮ್ಯಾಥ್ಯೂಸ್. 54 ರನ್ ಗಳಿಸಿ ಕ್ರೀಸ್ ನಲ್ಲಿರುವ ಮ್ಯಾಥ್ಯೂಸ್ ಗೆ ಪೆರೆರಾ 6 ರನ್ ಗಳಿಸಿ ಸಾಥ್ ನೀಡುತ್ತಿದ್ದಾರೆ. ಆದರೆ ಲಂಕಾದ ದುರದೃಷ್ಟವೇನೋ ಎಂಬಂತೆ ನಿನ್ನೆ ರಾತ್ರಿ ಮಳೆ ಸುರಿದಿದ್ದರಿಂದ ಮೈದಾನ ಕೊಂಚ ಒದ್ದೆಯಾಗಿದೆ. ಪಿಚ್ ಇನ್ನಷ್ಟು ಸ್ಪಿನ್ನರ್ ಗಳ ಸ್ನೇಹಿಯಾಗಿದೆ. ಬಾಲ್ ಬೇಗನೇ ಬೌಂಡರಿ ಗೆರೆ ದಾಟದು.
ಹೀಗಾಗಿ ಸಂಕಟಗಳ ಮೇಲೆ ಬರೆ ಎಳೆದಂತಾಗಿದೆ. ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಗೆ ಗಾಳಿ ಸಹಾಯ ಮಾಡುತ್ತಿದೆ. ಹೀಗಾಗಿ ಸುಲಭವಾಗಿ ಬಾಲ್ ಸ್ವಿಂಗ್ ಮಾಡುತ್ತಿದ್ದಾರೆ. ಪಿಚ್ ಕೊಂಚ ಬಿರುಕು ಮೂಡುತ್ತಿರುವುದರಿಂದ ಸ್ಪಿನ್ ಜೋಡಿ ಅಶ್ವಿನ್ ಮತ್ತು ಜಡೇಜಾಗೆ ಸಹಕಾರಿಯಾಗಿದೆ.