Gautam Gambhir: ಟೀಂ ಇಂಡಿಯಾ ನೂತನ ಕೋಚ್ ಗೌತಮ್ ಗಂಭೀರ್ ಈ ಎರಡು ಇನಿಂಗ್ಸ್ ಗಳನ್ನು ಫ್ಯಾನ್ಸ್ ಎಂದೂ ಮರೆಯಲ್ಲ

Krishnaveni K

ಬುಧವಾರ, 10 ಜುಲೈ 2024 (11:14 IST)
Photo Credit: X
ಮುಂಬೈ: ಟೀಂ ಇಂಡಿಯಾ ನೂತನ ಹೆಡ್ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸ್ಮರಣೀಯ ಇನಿಂಗ್ಸ್ ಗಳನ್ನಾಡಿದ್ದಾರೆ. ಆದರೆ ಅವರು ಆಡಿದ ಎರಡು ಇನಿಂಗ್ಸ್ ಗಳನ್ನು ಅಭಿಮಾನಿಗಳು ಎಂದೂ ಮರೆಯಲ್ಲ.

ಗೌತಮ್ ಗಂಭೀರ್ ಒಂದು ರೀತಿಯಲ್ಲಿ ಯಾವುದೇ ತಂಡದ ಪಾಲಿಗೆ ಲಕ್ಕಿ ಚಾರ್ಮ್ ಎನ್ನಬಹುದು. ಇದು ಟೀಂ ಇಂಡಿಯಾವಿರಲಿ, ಐಪಿಎಲ್ ತಂಡವಿರಲಿ ಗಂಭೀರ್ ಇದ್ದರೆ ತಂಡದ ಜೋಶ್ ಬೇರೆ ರೀತಿಯೇ ಇರುತ್ತದೆ ಎಂದು ಹಲವು ಬಾರಿ ಸಾಬೀತಾಗಿದೆ. ಗಂಭೀರ್ ಭಾರತದ ಪರ ಎರಡು ಸ್ಮರಣೀಯ ಇನಿಂಗ್ಸ್ ಗಳನ್ನಾಡಿದ್ದಾರೆ.

ಧೋನಿ ನಾಯಕತ್ವದಲ್ಲಿ ಭಾರತ ಒಂದು ಟಿ20 ವಿಶ್ವಕಪ್ ಮತ್ತು ಇನ್ನೊಂದು ಏಕದಿನ ವಿಶ್ವಕಪ್ ಗೆದ್ದುಕೊಂಡಿದೆ. ಈ ಎರಡೂ ಫೈನಲ್ ಗೆಲುವಿನಲ್ಲಿ ಭಾರತದ ಅನ್ ಸಂಗ್ ಹೀರೋ ಎಂದರೆ ಗಂಭೀರ್. ಈ ಎರಡೂ ಫೈನಲ್ ಗಳಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ ದಾಖಲೆ ಗಂಭೀರ್ ರದ್ದು. ಅದೂ ತಂಡ ಸಂಕಷ್ಟದಲ್ಲಿದ್ದಾಗ ಬಂದ ಇನಿಂಗ್ಸ್ ಗಳಾಗಿತ್ತು.

2007 ಟಿ20 ವಿಶ್ವಕಪ್ ಫೈನಲ್: ಈ ಟಿ20 ವಿಶ್ವಕಪ್ ಫೈನಲ್ ನಲ್ಲಿ ಭಾರತದ ಹಿರಿಯ ಬ್ಯಾಟಿಗ ಎಂದರೆ ಗೌತಮ್ ಗಂಭೀರ್ ಆಗಿದ್ದರು. ಸೆಹ್ವಾಗ್ ಗಾಯದ ಕಾರಣದಿಂದ ಈ ಪಂದ್ಯ ಆಡಿರಲಿಲ್ಲ. ಹೀಗಾಗಿ ಅನುಭವಿ ಬ್ಯಾಟಿಗನಾಗಿ ಗಂಭೀರ್ ಅಂದು ತಮ್ಮ ಜವಾಬ್ಧಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಗಂಭೀರ್ 54 ಎಸೆತಗಳಿಂದ 75 ರನ್ ಸಿಡಿಸಿ ತಂಡಕ್ಕೆ ಗೌರವಯುತ ಮೊತ್ತ ಕೊಡಿಸಲು ನೆರವಾದರು. ಅವರನ್ನು ಬಿಟ್ಟರೆ ರೋಹಿತ್ ಶರ್ಮಾ ಅಜೇಯ 30 ರನ್ ಸಿಡಿಸಿದ್ದರು. ಉಳಿದೆಲ್ಲಾ ಬ್ಯಾಟಿಗರು ಅಂದು ವಿಫಲರಾಗಿದ್ದರು. ಅಂತಿಮವಾಗಿ ತಂಡ 5 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಭಾರತ ಈ ಪಂದ್ಯವನ್ನು 5 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿತು. ಆದರೆ ಈ ಪಂದ್ಯದ ಗೆಲುವಿನ ಸಂಭ್ರಮದಲ್ಲಿ ಇಂದೂ ನಾವು ಗಂಭೀರ್ ಕೊಡುಗೆಯನ್ನು ನೆನೆಯುವುದೇ ಇಲ್ಲ.

2011 ರ ಏಕದಿನ ವಿಶ್ವಕಪ್ ಫೈನಲ್: ಈ ಫೈನಲ್ ಗೆಲುವಿನ ಬಗ್ಗೆ ಮಾತನಾಡುವಾಗ ಎಲ್ಲರೂ ಧೋನಿ ಇನಿಂಗ್ಸ್, ಅವರ ಸಿಕ್ಸರ್ ಬಗ್ಗೆಯಷ್ಟೇ ಮಾತನಾಡುತ್ತೇವೆ. ಆದರೆ ಅಂದು ತಂಡಕ್ಕೆ ಆಧಾರವಾಗಿ ನಿಂತಿದ್ದ ಇನ್ನೊಬ್ಬ ಬ್ಯಾಟಿಗ ಎಂದರೆ ಗೌತಮ್ ಗಂಭೀರ್. ಅವರು ಅಂದು 97 ರನ್ ಗಳಿಸಿ ಗರಿಷ್ಟ ಸ್ಕೋರರ್ ಆಗಿದ್ದರು. ಧೋನಿ ಜೊತೆಗೆ ಜೊತೆಯಾಟ ನಿಭಾಯಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಬಹುಶಃ ಅಂದು ಧೋನಿಗೆ ಗಂಭೀರ್ ಸಾಥ್ ನೀಡದೇ ಇದ್ದಿದ್ದರೆ ಆ ಪಂದ್ಯವನ್ನು ಗೆಲ್ಲುವುದು ಕಷ್ಟವಾಗುತ್ತಿತ್ತು. ಈ ಎರಡೂ ಇನಿಂಗ್ಸ್ ಗಳನ್ನು ಭಾರತೀಯ ಅಭಿಮಾನಿಗಳು ಎಂದೂ ಮರೆಯುವ ಹಾಗೆಯೇ ಇಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ