ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಒಂಟಿ ರನ್ ಕಬಳಿಸಿದ ವಿರಾಟ್ ಕೊಹ್ಲಿ ಶತಕ ಸಿಡಿಸಿದವರಂತೆ ಸಂಭ್ರಮಿಸಿದ್ದಾರೆ. ಇದಕ್ಕೆ ಕಾರಣವೂ ಇದೆ.
ಕಳೆದ ಎರಡೂ ಪಂದ್ಯಗಳಲ್ಲಿ ಕೊಹ್ಲಿ ಶೂನ್ಯ ಸಂಪಾದಿಸಿದ್ದರು. ಹೀಗಾಗಿ ಅವರು ಸದ್ಯದಲ್ಲೇ ನಿವೃತ್ತರಾಗಲಿದ್ದಾರೆ ಎಂದು ಎಲ್ಲರೂ ಮಾತನಾಡಿಕೊಂಡಿದ್ದರು. ಎರಡು ಬೆನ್ನು ಬೆನ್ನಿಗೆ ಶೂನ್ಯ ಸಂಪಾದನೆ ಕೊಹ್ಲಿಯನ್ನೂ ಒತ್ತಡಕ್ಕೆ ದೂಡಿತ್ತು.
ಆದರೆ ಇಂದಿನ ಪಂದ್ಯದಲ್ಲಿ ಹೀಗಾಗಲಿಲ್ಲ. ಶುಭಮನ್ ಗಿಲ್ ವಿಕೆಟ್ ಬಿದ್ದ ಬಳಿಕ ಕ್ರೀಸ್ ಗೆ ಬಂದ ಕೊಹ್ಲಿ ಜೋಶ್ ಹೇಝಲ್ ವುಡ್ ಬಾಲ್ ನಲ್ಲಿ ಸಿಂಗಲ್ಸ್ ತೆಗೆದು ಖಾತೆ ತೆರೆದರು. ಮೊದಲ ರನ್ ಗಳಿಸುತ್ತಿದ್ದಂತೇ ಕೊಹ್ಲಿ ಮುಖದಲ್ಲಿ ನಗು ಮೂಡಿತ್ತು. ಜೊತೆಗೆ ಕೈ ಎತ್ತಿ ಸಂಭ್ರಮಿಸಿದ್ದಾರೆ. ಜೊತೆಗೆ ಸುದೀರ್ಘ ಉಸಿರೆಳೆದುಕೊಂಡು ಅಬ್ಬಾ ಬಚಾವ್ ಎಂಬಂತೆ ಮುಖಭಾವ ಕೊಟ್ಟಿದ್ದಾರೆ. ಇನ್ನು, ವಿರಾಟ್ ಕೊಹ್ಲಿ ಮೊದಲ ರನ್ ಗಳಿಸಿದಾಗ ಮೈದಾನದಲ್ಲಿದ್ದ ಪ್ರೇಕ್ಷಕರೂ ಕೊಹ್ಲಿ ಎಂದು ಕೂಗಿ ಚಿಯರ್ ಅಪ್ ಮಾಡಿದ್ದಾರೆ.
ಇನ್ನು, ಪಂದ್ಯ ವಿಚಾರಕ್ಕೆ ಬರುವುದಾದರೆ ಆಸ್ಟ್ರೇಲಿಯಾ ನೀಡಿದ 237 ರನ್ ಗಳ ಸುಲಭ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿದೆ. ನಾಯಕ ಶುಭಮನ್ ಗಿಲ್ 24 ರನ್ ಗಳಿಸಿ ಔಟಾಗಿದ್ದಾರೆ. ರೋಹಿತ್ ಶರ್ಮಾ 48, ಕೊಹ್ಲಿ 28 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.