ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೊದಲ ಅರ್ಧಶತಕ ಗಳಿಸಿದ್ದು ಯಾರ ಬ್ಯಾಟ್ ನಲ್ಲಿ ಗೊತ್ತಾ? ಇದಕ್ಕೊಂದು ಇಂಟರೆಸ್ಟಿಂಗ್ ಕಹಾನಿಯಿದೆ.
ರೋಹಿತ್ ಶರ್ಮಾ ಬಗ್ಗೆ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದರು. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಅರ್ಧಶತಕ ಗಳಿಸಿದ್ದು 2007 ರಲ್ಲಿ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ರೋಹಿತ್ ಮ್ಯಾಚ್ ವಿನ್ನಿಂಗ್ ಇನಿಂಗ್ಸ್ ಆಡಿದ್ದರು.
ಅವರು ಈ ಅರ್ಧಶತಕ ಗಳಿಸಿದ್ದು ದಿನೇಶ್ ಕಾರ್ತಿಕ್ ಬ್ಯಾಟ್ ಬಳಸಿ. ಈ ಪಂದ್ಯಕ್ಕೆ ಮೊದಲು ದಿನೇಶ್ ತಮ್ಮ ಒಂದು ಬ್ಯಾಟ್ ಬೇಡ ಎಂದು ಪಕ್ಕಕ್ಕಿಟ್ಟಿದ್ದರಂತೆ. ಇದ್ಯಾಕೆ ಎತ್ತಿಟ್ಟಿದ್ದೀಯಾ ಎಂದು ರೋಹಿತ್ ಕೇಳಿದ್ದರು. ಅದಕ್ಕೆ ದಿನೇಶ್ ಈ ಬ್ಯಾಟ್ ಏನೂ ಚೆನ್ನಾಗಿಲ್ಲ ಎಂದಿದ್ದರಂತೆ.
ಆದರೆ ಆ ಬ್ಯಾಟ್ ನೋಡಿ ರೋಹಿತ್ ಯಾರು ಹೇಳಿದ್ದು ಚೆನ್ನಾಗಿಲ್ಲ ಎಂದು ನನಗೆ ಈ ಬ್ಯಾಟ್ ಕೊಡು ಎಂದು ಕೇಳಿದ್ದರಂತೆ. ಅದರಂತೆ ರೋಹಿತ್ ಅದೇ ಬ್ಯಾಟ್ ಹಿಡಿದು ಆ ಪಂದ್ಯವಾಡಿದ್ದರು. ಅಲ್ಲದೆ ಅದರಿಂದ ಮೊದಲ ಅರ್ಧಶತಕವನ್ನೂ ಗಳಿಸಿದ್ದರು. ಇದು ರೋಹಿತ್ ಪಾಲಿಗೆ ಲಕ್ಕಿ ಬ್ಯಾಟ್ ಆಯಿತು. ಆದರೆ ರೋಹಿತ್ ಎಲ್ಲೂ ಇದಕ್ಕೆ ನನಗೆ ಕ್ರೆಡಿಟ್ ಕೊಡಲಿಲ್ಲ ಎಂದು ದಿನೇಶ್ ಕಾರ್ತಿಕ್ ತಮಾಷೆ ಮಾಡಿದ್ದಾರೆ.