ಚೆನ್ನೈ: ಐಪಿಎಲ್ 2024 ರಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿರುವುದರಿಂದ ಲಾಭವಾಗಿರುವುದು ಮೆಂಟರ್ ಗೌತಮ್ ಗಂಭೀರ್ ಗೆ.
ಕೆಕೆಆರ್ ಇದು ಮೂರನೇ ಬಾರಿಗೆ ಐಪಿಎಲ್ ಗೆದ್ದಿದೆ. ಕಳೆದ ಎರಡು ಬಾರಿ ಕೆಕೆಆರ್ ಐಪಿಎಲ್ ಚಾಂಪಿಯನ್ ಆದಾಗ ಗೌತಮ್ ಗಂಭೀರ್ ತಂಡದ ನಾಯಕರಾಗಿದ್ದರು. ವಿಶೇಷವೆಂದರೆ ಇದೀಗ 10 ವರ್ಷದ ಬಳಿಕ ಐಪಿಎಲ್ ಗೆದ್ದಿದ್ದು ಮತ್ತೆ ಗಂಭೀರ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ ವರ್ಷವೇ ಕೆಕೆಆರ್ ಚಾಂಪಿಯನ್ ಆಗಿದೆ.
ಗಂಭೀರ್ ಈ ವರ್ಷವಷ್ಟೇ ಮೆಂಟರ್ ಆಗಿ ತಂಡವನ್ನು ಮತ್ತೆ ಕೂಡಿಕೊಂಡಿದ್ದಾರೆ. ಗಂಭೀರ್ ಅವರ ಕೆಲವು ಆಕ್ರಮಣಕಾರೀ ನಿರ್ಧಾರಗಳಿಂದಲೇ ತಂಡದಲ್ಲಿ ಭಾರೀ ಬದಲಾವಣೆಯಾಗಿತ್ತು. ಅದಕ್ಕೆ ಉತ್ತಮ ಉದಾಹರಣೆ ಸುನಿಲ್ ನರೈನ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿದ್ದು. ಶ್ರೇಯಸ್ ಅಯ್ಯರ್ ತಂಡದ ನಾಯಕರಾಗದರೂ ಗಂಭೀರ್ ಅವರೇ ತಂಡದ ನಿರ್ಧಾರಗಳಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದರು. ಹೀಗಾಗಿ ಗೆಲುವಿನ ಶ್ರೇಯಸ್ಸನ್ನು ಗಂಭೀರ್ ಗೇ ಅರ್ಪಿಸುತ್ತಿದ್ದಾರೆ.
ಇದೀಗ ಕೆಕೆಆರ್ ಗೆಲುವಿನ ಬೆನ್ನಲ್ಲೇ ಗಂಭೀರ್ ಗೆ ಭಾರೀ ಡಿಮ್ಯಾಂಡ್ ಬಂದಿದೆ. ಜಗಳಗಂಟ, ಕೋಪಿಷ್ಠ ಎಂದೆಲ್ಲಾ ಹಣೆಪಟ್ಟಿಯಿದ್ದರೂ ಗಂಭೀರ್ ಉತ್ತಮ ಸಲಹೆಗಾರ ಎನ್ನುವುದು ಎಲ್ಲರಿಗೂ ಖಾತ್ರಿಯಾಗಿದೆ. ಹೀಗಾಗಿ ಈಗ ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಗಂಭೀರ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಯಾರೂ ಮುಂದೆ ಬರದ ಹಿನ್ನಲೆಯಲ್ಲಿ ಬಿಸಿಸಿಐ ಗಂಭೀರ್ ಗೆ ಮಣೆ ಹಾಕಲೂ ಬಹುದು. ಆದರೆ ಅದಕ್ಕೆ ಕೆಕೆಆರ್ ಮಾಲಿಕ ಶಾರುಖ್ ಖಾನ್ ಒಪ್ಪಿಗೆ ಮತ್ತು ಟೀಂ ಇಂಡಿಯಾ ಆಟಗಾರರ ಸಹಮತವೂ ಮುಖ್ಯವಾಗುತ್ತದೆ. ಆದರೆ ಕೆಕೆಆರ್ ಚಾಂಪಿಯನ್ ಆಗಿರುವುದರಿಂದ ಗಂಭೀರ್ ಗೆ ಭಾರೀ ಡಿಮ್ಯಾಂಡ್ ಬಂದಿರುವುದು ಸುಳ್ಳಲ್ಲ.