ಕೊಲಂಬೊ: ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಪಕ್ಕಾ ಬ್ಯಾಟಿಗರಾಗಿದ್ದ ರಿಂಕು ಸಿಂಗ್, ಸೂರ್ಯಕುಮಾರ್ ಯಾದವ್ ಬೌಲಿಂಗ್ ನಲ್ಲಿ ಮಿಂಚಿ ಎಲ್ಲರೂ ಅಚ್ಚರಿಗೊಳಗಾಗುವಂತೆ ಮಾಡಿದ್ದರು. ಇದೆಲ್ಲದರ ಹಿಂದೆ ನೂತನ ಕೋಚ್ ಗೌತಮ್ ಗಂಭೀರ್ ಮಾಸ್ಟರ್ ಮೈಂಡ್ ಇದೆ ಎನ್ನಲಾಗಿದೆ.
ಐಪಿಎಲ್ ನಲ್ಲೂ ಪಕ್ಕಾ ಬೌಲರ್ ಆಗಿದ್ದ ಸುನಿಲ್ ನರೈನ್ ನನ್ನು ಆರಂಭಿಕ ಬ್ಯಾಟಿಗನಾಗಿ ಯಶಸ್ಸು ಕಾಣುವಂತೆ ಮಾಡಿದ್ದರಲ್ಲಿ ಗಂಭೀರ್ ಶ್ರಮವಿದೆ. ಇಂತಹ ಅನೇಕ ಅಚ್ಚರಿಯ ನಿರ್ಧಾರಗಳನ್ನು ಗಂಭೀರ್ ತೆಗೆದುಕೊಳ್ಳುತ್ತಾರೆ. ಈಗ ಟೀಂ ಇಂಡಿಯಾದಲ್ಲೂ ಇಂತಹ ಪ್ರಯೋಗ ಮಾಡುತ್ತಿದ್ದಾರೆ.
ಕೊನೆಯ ಟಿ20 ಪಂದ್ಯದಲ್ಲಿ ಕೊನೆಯ ಎರಡು ಓವರ್ ನಲ್ಲಿ ಬ್ಯಾಟಿಗರಾದ ರಿಂಕು ಸಿಂಗ್, ಸೂರ್ಯಕುಮಾರ್ ಯಾದವ್ ಬೌಲಿಂಗ್ ಗಿಳಿದಾಗ ಎಲ್ಲರೂ ಅಚ್ಚರಿಗೊಳಗಾಗಿದ್ದರು. ವಿಶೇಷವೆಂದರೆ ಇವರಿಬ್ಬರ ಬೌಲಿಂಗ್ ಕೈಚಳಕದಿಂದಾಗಿಯೇ ಭಾರತ ಸೂಪರ್ ಓವರ್ ವರೆಗೂ ಬಂದು ಪಂದ್ಯ ಗೆಲ್ಲುವಂತಾಗಿತ್ತು.
ಇದೀಗ ಏಕದಿನ ಸರಣಿಯಲ್ಲೂ ಗಂಭೀರ್ ಇಂತಹದ್ದೇ ಪ್ರಯೋಗ ಮುಂದುವರಿಸುವ ಸೂಚನೆ ನೀಡಿದ್ದಾರೆ. ಶ್ರೇಯಸ್ ಅಯ್ಯರ್ ಇಂದು ನೆಟ್ ಅಭ್ಯಾಸದ ವೇಳೆ ಬೌಲಿಂಗ್ ನಡೆಸುತ್ತಿದ್ದರು. ಇದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಶ್ರೇಯಸ್ ರನ್ನು ಕೇವಲ ಬ್ಯಾಟಿಗರಾಗಿ ಮಾತ್ರವಲ್ಲ, ಬೌಲಿಂಗ್ ಮಾಡುವುದನ್ನೂ ನೋಡಬಹುದು. ತಂಡದ ಎಲ್ಲಾ ಆಟಗಾರರೂ ತಂಡದ ಅಗತ್ಯಕ್ಕೆ ತಕ್ಕಂತೆ ಎಲ್ಲಾ ರೋಲ್ ಮಾಡಲು ಸಿದ್ಧರವಿರಬೇಕು ಎಂಬುದು ಗಂಭೀರ್ ಪಾಲಿಸಿ. ಇದೇ ಕಾರಣಕ್ಕೆ ಈಗ ಶ್ರೇಯಸ್ ಅಯ್ಯರ್ ರಿಂದ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಗಂಭೀರ್ ಯುಗದಲ್ಲಿ ಎಲ್ಲವೂ ಸಾಧ್ಯ ಎಂದು ತಮಾಷೆ ಮಾಡಿದ್ದಾರೆ.