ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ. ಗಂಭೀರ್ ಕೋಚ್ ಆದ ಮೇಲೆ ಕೆಲವು ಆಟಗಾರರು ತಮಗೆ ಟೀಂ ಇಂಡಿಯಾದಲ್ಲಿ ಅವಕಾಶದ ಬಾಗಿಲು ತೆರೆಯಬಹುದು ಎಂಬ ವಿಶ್ವಾಸದಲ್ಲಿದ್ದಾರೆ. ಅವರ ಪೈಕಿ ಆರ್ ಸಿಬಿಯ ಈ ಆಟಗಾರನೂ ಒಬ್ಬರು.
ಆರ್ ಸಿಬಿ ಪರ ಕಳೆದ ಐಪಿಎಲ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ರಜತ್ ಪಾಟೀದಾರ್ ಮೇಲೆ ಗಂಭೀರ್ ಈ ಹಿಂದೆಯೇ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪಾಟೀದಾರ್ ಅವರಂತಹವರಿಗೆ ರಾಷ್ಟ್ರೀಯ ತಂಡದಲ್ಲಿ ಹೆಚ್ಚಿನ ಅವಕಾಶ ಸಿಗಬೇಕು ಎಂದಿದ್ದರು. ಹೀಗಾಗಿ ಪಾಟೀದಾರ್ ಕಿರು ಮಾದರಿಯಲ್ಲೂ ಭಾರತ ತಂಡಕ್ಕೆ ಆಯ್ಕೆಯಾಗುವ ಕನಸಿನಲ್ಲಿದ್ದಾರೆ.
ಕಳೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಜತ್ ಪಾಟೀದಾರ್ ಗೆ ಅವಕಾಶ ಸಿಕ್ಕಿತ್ತು. ಸತತವಾಗಿ ಮೂರು ಪಂದ್ಯಗಳಲ್ಲಿ ಅವಕಾಶ ಸಿಕ್ಕಿಯೂ ಅವರ ಕೊಡುಗೆ ಶೂನ್ಯವಾಗಿತ್ತು. ಹೀಗಾಗಿ ತಂಡದಿಂದ ಕಿತ್ತು ಹಾಕಲಾಗಿತ್ತು. ಹೀಗಾಗಿ ತಂಡದಲ್ಲಿ ಅವಕಾಶದ ಬಾಗಿಲು ಬಂದ್ ಆಗಿದೆ ಎಂಬ ನಿರಾಸೆಯಲ್ಲಿರುವಾಗ ಗಂಭೀರ್ ಕೋಚ್ ಆಗಿರುವುದು ಅವರ ಪಾಲಿಗೆ ಭರವಸೆಯಾಗಿದೆ.
ಇವರಲ್ಲದೆ, ತಂಡದಿಂದ ಕಡೆಗಣಿಸಲ್ಪಟ್ಟಿರುವ ಶ್ರೇಯಸ್ ಅಯ್ಯರ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್ ಮೊದಲಾದ ಆಟಗಾರರೊಂದಿಗೆ ಈಗಾಗಲೇ ಕೆಲಸ ಮಾಡಿರುವ ಗಂಭೀರ್ ಈ ಪ್ರತಿಭಾವಂತರನ್ನು ಮುಂದೆ ಭಾರತ ತಂಡದ ಖಾಯಂ ಸದಸ್ಯರಾಗಿ ಮಾಡಿದರೂ ಅಚ್ಚರಿಯಿಲ್ಲ.