ಕೊಲೊಂಬೋ: ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೊಲೊಂಬೋಗೆ ಬಂದಿಳಿದಿದ್ದಾರೆ.
ರೋಹಿತ್ ಶರ್ಮಾ ಸೇರಿದಂತೆ ಏಕದಿನ ಪಂದ್ಯಗಳನ್ನಾಡಲಿರುವ ಆಟಗಾರರ ಬಳಗ ಕೊಲೊಂಬೋಗೆ ತಲುಪಿದೆ. ಇದೀಗ ಟಿ20 ಸರಣಿ ನಡೆಯುತ್ತಿದ್ದು ಇಂದು ಮೂರು ಪಂದ್ಯಗಳ ಟಿ20 ಸರಣಿ ಮುಕ್ತಾಯವಾಗಲಿದೆ. ಅದಾದ ಬಳಿಕ ಆಗಸ್ಟ್ 2 ರಿಂದ ಏಕದಿನ ಸರಣಿ ಆರಂಭವಾಗಲಿದೆ.
ಗೌತಮ್ ಗಂಭೀರ್ ಗೆ ಕೋಚ್ ಆಗಿ ಇದು ಮೊದಲ ಸರಣಿಯಾಗಿತ್ತು. ಮೊದಲ ಟಿ20 ಸರಣಿಯಲ್ಲೇ ಗೌತಮ್ ಕೋಚ್ ಆಗಿ ಸರಣಿ ಗೆಲುವು ಸಾಧಿಸಿ ಮೊದಲ ಯಶಸ್ಸು ಪಡೆದಿದ್ದಾರೆ. ಇದೀಗ ಏಕದಿನ ಸರಣಿ ಆರಂಭವಾಗಲಿದೆ. ಟಿ20 ವಿಶ್ವಕಪ್ ಗೆಲುವಿನ ಬಳಿಕ ರೋಹಿತ್, ಕೊಹ್ಲಿಯಂತಹ ಅನುಭವಿಗಳು ಆಡುತ್ತಿರುವ ಮೊದಲ ಸರಣಿ ಇದಾಗಿದೆ.
ಇಷ್ಟು ದಿನ ದ್ರಾವಿಡ್ ಜೊತೆ ತಂಡ ಕಟ್ಟಿದ್ದ ರೋಹಿತ್ ಗೆ ಈಗ ಹೊಸ ಕೋಚ್ ಗೌತಮ್ ಗಂಭೀರ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ರೋಹಿತ್ ಮತ್ತು ಗಂಭೀರ್ ನಡುವೆ ಮೊದಲಿನಿಂದಲೂ ಉತ್ತಮ ಬಾಂಧವ್ಯವಿದೆ. ಈ ನಡುವೆ ವಿರಾಟ್ ಕೊಹ್ಲಿ ಕೂಡಾ ತಂಡ ಕೂಡಿಕೊಳ್ಳುವುದರಿಂದ ಗಂಭೀರ್ ಜೊತೆಗೆ ಇಬ್ಬರ ಹೊಂದಾಣಿಕೆ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.