ದುಬೈ: ಬೆನ್ನು ನೋವಿನಿಂದಾಗಿ ಒಮ್ಮೆ ಸ್ಟ್ರೆಚರ್ ನಲ್ಲಿ ಮಲಗಿ ಮೈದಾನ ತೊರೆದಿದ್ದ ಹಾರ್ದಿಕ್ ಪಾಂಡ್ಯ ಮರಳಿ ಕ್ರಿಕೆಟ್ ಕಣಕ್ಕೆ ಬರಲು ಸಾಕಷ್ಟು ಸಮಯ ಬೇಕಾಯಿತು.
ಬಂದರೂ ಬೌಲಿಂಗ್ ಮಾಡಲಾಗುತ್ತಿರಲಿಲ್ಲ. ಆದರೆ ಈಗ ಸಂಪೂರ್ಣವಾಗಿ ಚೇತರಿಸಿಕೊಂಡ ಹಾರ್ದಿಕ್ ಪಾಂಡ್ಯ ವರ್ಷನ್ 2.0 ಎದುರಾಳಿಗಳಿಗೆ ಅಕ್ಷರಶಃ ಸಿಂಹ ಸ್ವಪ್ನರಾಗಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸೀಮಿತ ಓವರ್ ಗಳಲ್ಲಿ ಭಾರತದ ಪಾಲಿಗೆ ರಿಯಲ್ ಮ್ಯಾಚ್ ವಿನ್ನರ್ ಆಗಿದ್ದಾರೆ ಹಾರ್ದಿಕ್.
ಇದುವರೆಗೆ ಕೇವಲ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಗೇಮ್ ಪ್ಲ್ಯಾನ್ ಮಾಡಿಕೊಂಡಿದ್ದ ಎದುರಾಳಿಗಳಿಗೆ ಈಗ ಹಾರ್ದಿಕ್ ತಲೆನೋವಾಗಿದ್ದಾರೆ. ರೋಹಿತ್, ಕೊಹ್ಲಿ ಕೈ ಕೊಟ್ಟರೂ ಮ್ಯಾಚ್ ಗೆಲ್ಲಿಸಿಕೊಡುವ ಶಕ್ತಿ ಹಾರ್ದಿಕ್ ಗಿದೆ. ಎಲ್ಲಕ್ಕಿಂತ ಹೆಚ್ಚು ಉದ್ವೇಗಕ್ಕೊಳಗಾಗದೇ ಕೊನೆಯವರೆಗೂ ಶಾಂತ ಚಿತ್ತರಾಗಿ ಪಂದ್ಯ ಮುಗಿಸುವ ಅವರ ತಾಕತ್ತು ಈಗ ಭಾರತಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಹೀಗಾಗಿ ಈ ಏಷ್ಯಾ ಕಪ್ ಮಾತ್ರವಲ್ಲ, ಮುಂದಿನ ಟಿ20 ವಿಶ್ವಕಪ್ ಗೂ ಹಾರ್ದಿಕ್ ಭಾರತದ ಪಾಲಿಗೆ ಪ್ರಮುಖ ಆಟಗಾರರಾಗಿದ್ದಾರೆ.