ಧೋನಿಯಂತೆ ಅಚ್ಚರಿಯ ನಿರ್ಧಾರ ತೆಗೆದುಕೊಂಡು ಕ್ಲಿಕ್ ಆದ ಹಾರ್ದಿಕ್ ಪಾಂಡ್ಯ
ಬುಧವಾರ, 4 ಜನವರಿ 2023 (08:40 IST)
ಮುಂಬೈ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ ರೋಚಕವಾಗಿ 2 ರನ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಚೊಚ್ಚಲ ಟಿ20 ಪಂದ್ಯವಾಡಿದ ಶುಬ್ನಂ ಗಿಲ್ ಕೇವಲ 7 ರನ್ ಗೆ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ 37 ರನ್ ಗಳಿಸಿದರು. ಬಳಿಕ ಪಂದ್ಯ ಸೂರ್ಯಕುಮಾರ್ ಯಾದವ್ 7, ಸಂಜು ಸ್ಯಾಮ್ಸನ್ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾದರು.
ನಾಯಕ ಹಾರ್ದಿಕ್ ಪಾಂಡ್ಯ 29 ರನ್ ಗಳ ಕೊಡುಗೆ ನೀಡಿದರು. ಇಲ್ಲಿಯವರೆಗೆ ಭಾರತ ಸಂಕಷ್ಟದಲ್ಲಿತ್ತು. ಆದರೆ ಬಳಿಕ ಬಂದ ಅಕ್ಸರ್ ಪಟೇಲ್, ದೀಪಕ್ ಹೂಡಾ ಪಂದ್ಯದ ದಿಕ್ಕು ಬದಲಾಯಿಸಿದರು. ಹೂಡಾ 23 ಎಸೆತಗಳಿಂದ 41 ಬಾರಿಸಿದರೆ ಅಕ್ಸರ್ ಪಟೇಲ್ 31 ರನ್ ಗಳಿಸಿ ತಂಡಕ್ಕೆ ಉತ್ತಮ ಮೊತ್ತ ನೀಡಿದರು.
ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ಲಂಕಾ ಆರಂಭ ಉತ್ತಮವಾಗಿರಲಿಲ್ಲ. ಆದರೆ ಕೊನೆಯಲ್ಲಿ ದಸುನ್ ಶಣಕ 45 ರನ್ ಗಳಿಸಿ ಅಪಾಯಕಾರಿಯಾದರು. ಆದರೆ ಕೊನೆಯ ಓವರ್ ನಲ್ಲಿ 6 ಎಸೆತಗಳಲ್ಲಿ 12 ರನ್ ಬೇಕಾಗಿದ್ದಾಗ ಕ್ಯಾಪ್ಟನ್ ಹಾರ್ದಿಕ್ ಅಚ್ಚರಿಯೆಂಬಂತೆ ಸ್ಪಿನ್ನರ್ ಅಕ್ಸರ್ ಪಟೇಲ್ ಗೆ ಬೌಲಿಂಗ್ ಒಪ್ಪಿಸಿದರು. ಧೋನಿಯಂತೇ ಹಾರ್ದಿಕ್ ಕೊನೆಯ ಓವರ್ ನಲ್ಲಿ ಇಂತಹದ್ದೊಂದು ಅಚ್ಚರಿಯ ನಿರ್ಧಾರ ಕೈಗೊಂಡರು. ಕೊನೆಯ ಮೂರು ಎಸೆತಗಳಲ್ಲಿ 2 ರನೌಟ್ ಸೇರಿದಂತೆ 2 ವಿಕೆಟ್ ಬಿದ್ದು ಲಂಕಾ ಸೋಲೊಪ್ಪಿಕೊಂಡಿತು. ಅಂತಿಮವಾಗಿ ಲಂಕಾ 20 ಓವರ್ ಗಳಲ್ಲಿ 160 ರನ್ ಗಳಿಗೆ ಆಲೌಟ್ ಆಯಿತು.