ಸೆಮಿಫೈನಲ್ ಅಗ್ನಿಪರೀಕ್ಷೆ ಪಾಸಾಗುತ್ತಾ ಹರ್ಮನ್ ಪ್ರೀತ್ ಪಡೆ?
ಭಾರತ ತಂಡ ಹಲವು ಬಾರಿ ಐಸಿಸಿ ಟೂರ್ನಿಗಳಲ್ಲಿ ಸೆಮಿಫೈನಲ್ ಹಂತ ತಲುಪಿದೆ. ಆದರೆ ಫೈನಲ್ ತಲುಪಿದ್ದು ಒಮ್ಮೆ ಮಾತ್ರ. ಪ್ರತೀ ಬಾರಿ ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ಪ್ರಬಲ ತಂಡದ ವಿರುದ್ಧ ಮಂಡಿಯೂರುತ್ತಲೇ ಇದೆ. ವಿಶ್ವಕಪ್ ಗೆಲ್ಲುವ ಕನಸು ನನಸಾಗಬೇಕಾದರೆ ಭಾರತ ತಂಡ ಈ ತಡೆಗೋಡೆಯನ್ನು ತೊಡೆದು ಹಾಕಲೇಬೇಕು.
ಆಸ್ಟ್ರೇಲಿಯಾ ಸೋಲಿಸುವುದು ಭಾರತಕ್ಕೆ ಸುಲಭವಲ್ಲ. ಸದ್ಯಕ್ಕೆ ಭಾರತ ತಂಡದಲ್ಲಿ ಫಾರ್ಮ್ ನಲ್ಲಿರುವ ಬ್ಯಾಟಿಗರೆಂದರೆ ಸ್ಮೃತಿ ಮಂಧನಾ ಮತ್ತು ರಿಚಾ ಘೋಷ್ ಮಾತ್ರ. ನಾಯಕಿ ಹರ್ಮನ್ ಪ್ರೀತ್ ಕೌರ್ ಇದುವರೆಗೆ ಖ್ಯಾತಿಗೆ ತಕ್ಕ ಆಟವಾಡಿಲ್ಲ. ಬೌಲಿಂಗ್ ನಲ್ಲಿ ರೇಣುಕಾ ಸಿಂಗ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಆದರೆ ಅವರಿಗೆ ತಕ್ಕ ಸಾಥ್ ಸಿಗುತ್ತಿಲ್ಲ. ಫೀಲ್ಡಿಂಗ್ ನಲ್ಲಿ ಭಾರತ ಇನ್ನಷ್ಟು ಸುಧಾರಣೆ ಕಾಣಬೇಕಿದೆ. ಸರ್ವಾಂಗೀಣವಾಗಿ ಹೋರಾಡಿದರೆ ಮಾತ್ರ ಭಾರತದ ಕನಸು ನನಸಾಗಬಹುದು. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 6.30 ಕ್ಕೆ ಆರಂಭವಾಗಲಿದೆ.