ವಿಂಡೀಸ್ ಜಂಬದ ಕೊಹ್ಲಿಯ ಕೊಂಬು ಮುರದಿದ್ದು ಹೇಗೆ ಗೊತ್ತಾ?!
ಸೋಮವಾರ, 10 ಜುಲೈ 2017 (10:38 IST)
ಜಮೈಕಾ: ನಿನ್ನೆ ನಡೆದ ಏಕೈಕ ಟಿ20 ಪಂದ್ಯದಲ್ಲಿ ಆರಂಭದಲ್ಲಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬ್ಯಾಟಿಂಗ್ ಕಲಿಗಳು ರನ್ ಗುಡ್ಡೆ ಹಾಕುತ್ತಿದ್ದುದು ನೋಡಿದರೆ ಭಾರತಕ್ಕೆ ಈ ಪಂದ್ಯ ಸುಲಭ ತುತ್ತು ಎಂದೇ ನಂಬಲಾಗಿತ್ತು. ಆದರೆ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದ ಕೊಹ್ಲಿ ಬಳಗಕ್ಕೆ ಅತಿಥೇಯರು ಭರ್ಜರಿ ಶಾಕ್ ಕೊಟ್ಟಿದ್ದಾರೆ.
ಸರಾಗವಾಗಿ ರನ್ ಗಳಿಸುತ್ತಿದ್ದ ಕೊಹ್ಲಿ ಮತ್ತು ಧವನ್ ಗೆ ವಿಂಡೀಸ್ ನಾಯಕ ಹೋಲ್ಡರ್ ದಾಳಿಗಿಳಿಯುತ್ತಲೇ ಬ್ರೇಕ್ ಬಿತ್ತು. ಆದರೂ ಮೊತ್ತ 190 ಕ್ಕೆ ತಲುಪಿದಾಗ ಭಾರತ ಪಂದ್ಯ ಸುಲಭವಾಗಿ ಗೆಲ್ಲಬಹುದು ಎಂದೇ ಲೆಕ್ಕಾಚಾರ ಹಾಕಲಾಗಿತ್ತು.
ವಿಂಡೀಸ್ ಸುಂಟರಗಾಳಿ ಕ್ರಿಸ್ ಗೇಲ್ ಬಗ್ಗೆ ಭಾರತೀಯರಿಗೆ ಈಗ ಅಷ್ಟೊಂದು ಭಯವಿಲ್ಲ. ಯಾಕೆಂದರೆ ಅವರು ಇತ್ತೀಚೆಗೆ ಭಾರತದ ವಿರುದ್ಧ ಬಾಲ ಬಿಚ್ಚಿದ ಉದಾಹರಣೆಯಿಲ್ಲ. ಆದರೆ ಇವಿನ್ ಲೆವಿಸ್ ಇಂತಹದ್ದೊಂದು ಪೆಟ್ಟು ನೀಡಬಹುದು ಎಂದು ಭಾರತೀಯರು ಖಂಡಿತಾ ಅಂದುಕೊಂಡಿರಲಿಲ್ಲ.
ಕೇವಲ 62 ಬಾಲ್ ಗಳಲ್ಲಿ 125 ರನ್ ಸಿಡಿಸಿದ ಅವರು 12 ಸಿಕ್ಸರ್, 6 ಬೌಂಡರಿ ಚಚ್ಚಿದರು. ಇವರ ಭರ್ಜರಿ ಇನಿಂಗ್ಸ್ ನಲ್ಲಿ ಭಾರತೀಯ ಬೌಲರ್ ಗಳು, ಫೀಲ್ಡರ್ ಗಳ ಕೊಡುಗೆಯೂ ಇತ್ತೆನ್ನಿ. ಎರಡೆರಡು ಬಾರಿ ಲೆವಿಸ್ ಕೊಟ್ಟ ಕ್ಯಾಚ್ ಬಿಟ್ಟ ಟೀಂ ಇಂಡಿಯಾ ಫೀಲ್ಡರ್ ಗಳಿಗೆ, ಬೌಲರ್ ಗಳೂ ಧಾರಾಳತನ ತೋರಿ ಉದಾರಿಗಳಾದರು.
ಹೀಗಾಗಿ ಲೆಕ್ಕಕ್ಕೇ ಇಲ್ಲ ಎಂಬಂತಿದ್ದ ವಿಂಡೀಸ್ 190 ರನ್ ಗಳ ಮೊತ್ತವನ್ನು ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಕುಲದೀಪ್ ಯಾದವ್ 1 ವಿಕೆಟ್ ಕಿತ್ತಿದ್ದರೆ, ಭುವನೇಶ್ವರ್ ಕುಮಾರ್ ವಿಕೆಟ್ ಕೀಳದಿದ್ದರೂ, ರನ್ ನಿಯಂತ್ರಿಸಿ ಗಮನ ಸೆಳೆದರು. ಪಂದ್ಯ ಮುಗಿದ ಮೇಲೆ ಯಥಾವತ್ತು ಕೊಹ್ಲಿ ಕೋಪ ಫೀಲ್ಡರ್ ಗಳ ಮೇಲೆ ತಿರುಗಿದೆ. ಅಲ್ಲದೆ, ಬ್ಯಾಟ್ಸ್ ಮನ್ ಗಳು ಇನ್ನೂ 20-30 ರನ್ ಮಾಡಬೇಕಿತ್ತು ಎಂದು ಮೈ ಪರಚಿಕೊಂಡರು. ಯಾವುದು ತಮ್ಮ ಪ್ಲಸ್ ಪಾಯಿಂಟ್ ಎಂದು ಹೆಮ್ಮೆಯಿಂದ ಬೀಗುತ್ತಿದ್ದರೋ, ಅದೇ ಡಿಪಾರ್ಟ್ ಮೆಂಟ್ ಕೊಹ್ಲಿಗೆ ಕೈ ಕೊಟ್ಟಿತು. ಇದರಿಂದಾಗಿ ಜಯದೊಂದಿಗೆ ಮುಗಿಸಬೇಕಿದ್ದ ಸರಣಿಯನ್ನು ಸೋಲಿನೊಂದಿಗೆ ಮಂಗಳ ಹಾಡುವಂತಾಯಿತು.