ಓಲ್ಡ್ ಟ್ರಾಫರ್ಡ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದು ಟೀಂ ಇಂಡಿಯಾ 89 ವರ್ಷಗಳ ಶಾಪ ಕಳೆಯಲಿದೆಯಾ ಎಂಬುದೇ ಎಲ್ಲರ ಕುತೂಹಲವಾಗಿದೆ.
ಕಳೆದ ಪಂದ್ಯವನ್ನು ಸೋತಿರುವ ಟೀಂ ಇಂಡಿಯಾ ಸರಣಿಯಲ್ಲಿ 1-2 ರಿಂದ ಹಿನ್ನಡೆಯಲ್ಲಿದೆ. ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆದರೆ ಈಗಾಗಲೇ ಗಾಯಾಳುಗಳ ಗೂಡಾಗಿರುವ ಟೀಂ ಇಂಡಿಯಾಗೆ ಬಲಿಷ್ಠ ಇಂಗ್ಲೆಂಡ್ ತಂಡವನ್ನು ತವರಿನಲ್ಲಿಯೇ ಸೋಲಿಸುವುದು ಕಠಿಣವಾಗಲಿದೆ.
ಕಳೆದ 18 ವರ್ಷಗಳಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಇನ್ನು ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಕಳೆದ 89 ವರ್ಷಗಳಿಂದ ಒಂದೇ ಒಂದು ಪಂದ್ಯ ಗೆದ್ದಿಲ್ಲ. ಹೀಗಾಗಿ ಈ ಎರಡು ಶಾಪ ಕಳೆಯಲು ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.
ಆದರೆ ಭಾರತಕ್ಕೆ ಈಗ ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ ಪ್ರಮುಖ ಆಟಗಾರರ ಗಾಯ. ಇನ್ ಫಾರ್ಮ್ ಬೌಲರ್ ಆಕಾಶ್ ದೀಪ್, ನಿತೀಶ್ ಕುಮಾರ್ ರೆಡ್ಡಿ ಗಾಯಗೊಂಡಿದ್ದಾರೆ. ಇದುವರೆಗೆ ಅವಕಾಶ ಪಡೆಯದ ಅರ್ಷ್ ದೀಪ್ ಸಿಂಗ್ ಕೂಡಾ ಗಾಯವಾಗಿ ಮೂಲೆ ಸೇರಿದ್ದಾರೆ. ಹೀಗಾಗಿ ಈಗ ನಾಯಕ ಶುಭಮನ್ ಗಿಲ್ ಗೆ ಆಡುವ ಬಳಗ ಆಯ್ಕೆ ಮಾಡುವುದೇ ದೊಡ್ಡ ತಲೆನೋವು. ಈಗ ಬೌಲಿಂಗ್ ಜವಾಬ್ಧಾರಿ ಎಲ್ಲಾ ಹೊಣೆ ಜಸ್ಪ್ರೀತ್ ಬುಮ್ರಾ ಹೆಗಲಿಗೇರಿದೆ. ಇದನ್ನು ಅವರು ಹೇಗೆ ನಿಭಾಯಿಸುತ್ತಾರೆ ನೋಡಬೇಕಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.