ಐಸಿಸಿ ಏಕದಿನ ವಿಶ್ವಕಪ್ ಗೆ ಇಂದು ಚಾಲನೆ: ಸರಳವಾಗಿ ಉದ್ಘಾಟನೆ
ಗುರುವಾರ, 5 ಅಕ್ಟೋಬರ್ 2023 (08:30 IST)
ಅಹಮ್ಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಗೆ ಇಂದಿನಿಂದ ಚಾಲನೆ ಸಿಗಲಿದೆ. ಇಂದು ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.
ಇದೇ ಮೊದಲ ಬಾರಿಗೆ ಭಾರತ ಏಕಾಂಗಿಯಾಗಿ ಕೂಟ ಆಯೋಜಿಸುತ್ತಿದೆ. 10 ತಂಡಗಳು ಕೂಟದಲ್ಲಿ ಭಾಗಿಯಾಗುತ್ತಿವೆ. ನವಂಬರ್ 19 ರಂದು ಅಹಮ್ಮದಾಬಾದ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಇಂದು ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯ ಗೆದ್ದ ತಂಡ 33 ಕೋಟಿ ರೂ. ಬಹುಮಾನ ಮೊತ್ತ ಜೇಬಿಗಿಳಿಸಲಿದೆ. ರನ್ನರ್ ಅಪ್ ತಂಡಕ್ಕೆ 16 ಕೋಟಿ ರೂ. ಬಹುಮಾನ ಹಣ ಸಿಗಲಿದೆ. ಹೆಚ್ಚಿನ ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗುತ್ತಿದೆ. ಅಹಮ್ಮದಾಬಾದ್, ಮುಂಬೈ, ಕೋಲ್ಕೊತ್ತಾ, ಧರ್ಮಶಾಲಾ, ಗುವಾಹಟಿ, ತಿರುವನಂತಪುರಂ, ಚೆನ್ನೈ, ಬೆಂಗಳೂರು, ಹೈದರಾಬಾದ್, ದೆಹಲಿ ಸೇರಿದಂತೆ ಭಾರತದ ವಿವಿಧ ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ಮತ್ತು ಹಾಟ್ ಸ್ಟಾರ್ ಆಪ್ ನಲ್ಲಿ ವೀಕ್ಷಿಸಬಹುದು.