ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯಕ್ಕೆ ಟೀಂ ಇಂಡಿಯಾ ಆಡುವ ಬಳಗದಲ್ಲಿ ಬದಲಾವಣೆ ಜೊತೆಗೆ ಬ್ಯಾಟಿಂಗ್ ಕ್ರಮಾಂಕವೂ ವ್ಯತ್ಯಾಸವಾಗಲಿದೆ ಎಂದು ಸುಳಿವು ಸಿಕ್ಕಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಆಡಿ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಮತ್ತು ಗಾಯಗೊಂಡಿದ್ದ ಶುಬ್ಮನ್ ಗಿಲ್ ಕೂಡಾ ವಾಪಸ್ ಆಗುತ್ತಿದ್ದಾರೆ.
ಅತ್ತ ಮೊದಲ ಟೆಸ್ಟ್ ನಲ್ಲಿ ಕೆಎಲ್ ರಾಹುಲ್-ಯಶಸ್ವಿ ಜೈಸ್ವಾಲ್ ಜೋಡಿ ಓಪನರ್ ಗಳಾಗಿ ಭರ್ಜರಿ ಸಕ್ಸಸ್ ಕಂಡಿದ್ದರು. ಇತ್ತ ರೋಹಿತ್ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಫಾರ್ಮ್ ನಲ್ಲಿರಲಿಲ್ಲ. ಹೀಗಾಗಿ ಕಳೆದ ಪಂದ್ಯದ ಯಶಸ್ವೀ ಜೋಡಿಯೇ ಎರಡನೇ ಪಂದ್ಯದಲ್ಲೂ ಕಣಕ್ಕಿಳಿಯಲಿದೆ ಎನ್ನುತ್ತಿದೆ ಮೂಲಗಳು.
ಮೊನ್ನೆ ನಡೆದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ಐದನೇ ಕ್ರಮಾಂಕದ ಬ್ಯಾಟಿಗರಾಗಿದ್ದರು. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್-ರಾಹುಲ್ ಜೋಡಿಯನ್ನೇ ಆರಂಭಿಕರಾಗಿ ಕಣಕ್ಕಿಳಿಸಿ ರೋಹಿತ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯುವ ನಿರೀಕ್ಷೆಯಿದೆ. ಹೀಗಾಗಿ ದೇವದತ್ತ್ ಪಡಿಕ್ಕಲ್ ನಿರೀಕ್ಷೆಯಂತೇ ಸ್ಥಾನ ಕಳೆದುಕೊಳ್ಳಲಿದ್ದು ಶುಬ್ಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.