ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಸೈಲೆಂಟ್ ಆಗಿದ್ದ ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ ಎರಡನೇ ದಿನ ಫುಲ್ ವಯಲೆಂಟ್ ಆಗಿದ್ದಾರೆ. ಇಂದು ಬೆಂಕಿಯುಂಡೆಯಂತಹ ಚೆಂಡು ಎಸೆಯುತ್ತಿರುವ ಬುಮ್ರಾ ಎದುರಾಳಿ ಬ್ಯಾಟಿಗನ ಸ್ಟಂಪ್ ಕಿತ್ತಾಕಿದ್ದಾರೆ.
ನಿನ್ನೆ ಮೊದಲ ದಿನದಂತ್ಯಕ್ಕೆ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಜೋ ರೂಟ್ ಶತಕದ ಅಂಚಿನಲ್ಲಿದ್ದರೆ ನಾಯಕ ಬೆನ್ ಸ್ಟೋಕ್ಸ್ ತಕ್ಕ ಸಾಥ್ ನೀಡುತ್ತಿದ್ದರು. ನಿನ್ನೆಯ ದಿನದಾಟದಲ್ಲಿ ನಿತೀಶ್ ಕುಮಾರ್ ರೆಡ್ಡಿ ಮಾತ್ರ ಯಶಸ್ಸು ಕಂಡಿದ್ದರು. ಉಳಿದಂತೆ ಬುಮ್ರಾಗೆ ಒಂದು, ಜಡೇಜಾಗೆ 1 ವಿಕೆಟ್ ಸಿಕ್ಕಿತ್ತು.
ಆದರೆ ಇಂದು ಬುಮ್ರಾ ಬೆಳಗಿನ ಅವಧಿಯಲ್ಲೇ ಕಮಾಲ್ ಮಾಡಿದ್ದಾರೆ. ಶತಕ ಗಳಿಸಿದ್ದ ಜೋ ರೂಟ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್ ವಿಕೆಟ್ ಗಳನ್ನು ಪಟ ಪಟನೆ ಉರುಳಿಸಿದ ಬುಮ್ರಾ ಎದುರಾಳಿಗಳಿಗೆ ಆಘಾತ ನೀಡಿದ್ದಾರೆ. ಇದುವರೆಗೆ ಬುಮ್ರಾ ವಿಕೆಟ್ ಬೇಟೆ 4 ಕ್ಕೆ ಏರಿದೆ. ಅದರಲ್ಲೂ ಬೆನ್ ಸ್ಟೋಕ್ಸ್ ಗೆ ಎಸೆದ ಎಸೆತದಲ್ಲಿ ಲೆಗ್ ಸ್ಟಂಪ್ ಕಿತ್ತುಕೊಂಡು ಬಂದಿದೆ. ಸದ್ಯದ ಅವರ ಬೌಲಿಂಗ್ ನೋಡುತ್ತಿದ್ದರೆ ಈ ಇನಿಂಗ್ಸ್ ನಲ್ಲೂ 5 ವಿಕೆಟ್ ಗಳ ಗೊಂಚಲು ಪಡೆಯುವುದು ಖಚಿತವೆನಿಸುತ್ತಿದೆ.
ಇನ್ನು ನಿನ್ನೆ 251 ರನ್ ಗಳಿಗೆ ದಿನದಾಟ ಮುಗಿಸಿದ್ದ ಇಂಗ್ಲೆಂಡ್ ಇದೀಗ 30 ರನ್ ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿದೆ. ಇತ್ತೀಚೆಗಿನ ವರದಿ ಬಂದಾಗ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿದೆ.