ಕಟಕ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು 4 ವಿಕೆಟ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿದೆ. ಜೊತೆಗೆ ಕೆಲವು ದಾಖಲೆಗಳನ್ನೂ ಮಾಡಿದೆ.
ಕಳೆದ ಎರಡು ಟೆಸ್ಟ್ ಸರಣಿಗಳಲ್ಲಿ ಸೋಲುಂಡಿದ್ದ ರೋಹಿತ್ ಪಡೆಗೆ ಈ ಗೆಲುವು ಸಮಾಧಾನ ತಂದಿದೆ. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 305 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ನಾಯಕ ರೋಹಿತ್ ಶರ್ಮಾ ಶತಕ, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಅಕ್ಸರ್ ಪಟೇಲ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ಭಾರತ 44.3 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿ ಗೆಲುವು ಸಾಧಿಸಿತು.
ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯನ್ನು ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ತನ್ನದಾಗಿಸಿಕೊಂಡಿತು. 300 ಪ್ಲಸ್ ರನ್ ಗಳಿಸಿಯೂ ಅತೀ ಹೆಚ್ಚು ಪಂದ್ಯ ಸೋತ ಕುಖ್ಯಾತಿ ಇಂಗ್ಲೆಂಡ್ ನದ್ದಾಯಿತು. 99 ಪಂದ್ಯಗಳಲ್ಲಿ ಇಂಗ್ಲೆಂಡ್ 300 ಪ್ಲಸ್ ರನ್ ಗಳಿಸಿಯೂ 28 ಬಾರಿ ಸೋತಿತು.
ಕಳೆದ 20 ವರ್ಷಗಳಲ್ಲಿ ಭಾರತದ ನೆಲದಲ್ಲಿ ಇಂಗ್ಲೆಂಡ್ ಗೆ ಇದು 7 ನೇ ಸರಣಿ ಸೋಲಾಗಿದೆ. 50 ಏಕದಿನ ಪಂದ್ಯಗಳಲ್ಲಿ ನಾಯಕರಾದ ಬಳಿಕ ಅತೀ ಹೆಚ್ಚು ಗೆಲುವು ಸಾಧಿಸಿದ ನಾಯಕರ ಪಟ್ಟಿಯಲ್ಲಿ ರೋಹಿತ್ ಈಗ 36 ಗೆಲುವುಗಳೊಂದಿಗೆ ವಿವಿ ರಿಚರ್ಡ್ಸ್ ಜೊತೆಗೆ ಮೂರನೇ ಸ್ಥಾನಕ್ಕೇರಿದರು.