IND vs ENG: ರೋಹಿತ್ ಶರ್ಮಾ ಬೆನ್ನಲ್ಲೇ ಶುಬ್ಮನ್ ಗಿಲ್ ಶತಕ

Krishnaveni K

ಶುಕ್ರವಾರ, 8 ಮಾರ್ಚ್ 2024 (11:46 IST)
ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಒಬ್ಬರಾದ ಮೇಲೆ ಶತಕ ಸಿಡಿಸಿದ್ದು ಭಾರತ ಇತ್ತೀಚೆಗಿನ ವರದಿ ಬಂದಾಗ 1 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದೆ.

ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 218 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ನಿನ್ನೆ ಇನಿಂಗ್ಸ್ ಆರಂಭಿಸಿದ್ದ ಭಾರತ ಯಶಸ್ವೀ ಜೈಸ್ವಾಲ್ ವಿಕೆಟ್ ಕಳೆದುಕೊಂಡು ದಿನದಂತ್ಯಕ್ಕೆ 135 ರನ್ ಗಳಿಸಿತ್ತು. ಇಂದು ವಿಕೆಟ್ ಕಳೆದುಕೊಳ್ಳದೇ 129 ರನ್ ಗಳಿಸಿತು. ವಿಶೇಷವೆಂದರೆ ಇಂಗ್ಲೆಂಡ್ ನಂತೇ ಭಾರತ ಈ ಸರಣಿಯಲ್ಲಿ ಇದೇ ಮೊದಲ ಬಾರಿ ವೇಗವಾಗಿ ರನ್ ಗಳಿಸುತ್ತಿದೆ. ಆ ಮೂಲಕ ಎದುರಾಳಿಗೆ ಬಾಝ‍್ ಬಾಲ್ ನ ರುಚಿ ತೋರಿಸುತ್ತಿದೆ.

ಇಂದಿನ ವಿಶೇಷತೆ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಶತಕ. ಇಬ್ಬರಿಗೂ ಈ ಸರಣಿಯಲ್ಲಿ ಇದು ಎರಡನೇ ಶತಕ. ರೋಹಿತ್ ಶರ್ಮಾ ಮೊದಲನೆಯವರಾಗಿ ಶತಕ ಪೂರೈಸಿದರೆ ಅವರ ಹಿಂದೆಯೇ ಎರಡೇ ಬಾಲ್ ಅಂತರದಲ್ಲಿ ಶುಬ್ಮನ್ ಗಿಲ್ ಕೂಡಾ ಶತಕ ಸಿಡಿಸಿದರು.

ರೋಹಿತ್ ಶರ್ಮಾ ಒಟ್ಟು 3 ಸಿಕ್ಸರ್ 13 ಬೌಂಡರಿ ಸಹಿತ 156 ಎಸೆತಗಳಿಂದ 101 ರನ್ ಗಳಿಸಿದರು. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಅವರ 12 ನೇ ಶತಕವಾಗಿತ್ತು. ಮುಂದಿನ ಓವರ್ ನಲ್ಲಿಯೇ ಬೌಂಡರಿ ಗಳಿಸಿ ಶುಬ್ಮನ್ ಗಿಲ್ ಕೂಡಾ ಶತಕ ಪೂರೈಸಿದರು. ಅವರಿಗೆ ಇದು ಟೆಸ್ಟ್ ಕ್ರಿಕೆಟ್ ನ ನಾಲ್ಕನೇ ಶತಕವಾಗಿತ್ತು. ಅವರೀಗ 160 ಎಸೆತಗಳಿಂದ 5 ಸಿಕ್ಸರ್ ಸಹಿತ 102 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇಬ್ಬರೂ 160 ರನ್ ಗಳ ಜೊತೆಯಾಟವಾಡಿದ್ದಾರೆ. ವಿಶೇಷವೆಂದರೆ ಮಗನ ಶತಕ ನೋಡಲು ಶುಬ್ಮನ್ ತಂದೆ ಮೈದಾನದಲ್ಲಿ ಉಪಸ್ಥಿತರಿದ್ದರು. ಇದೀಗ ಭಾರತ ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ಮೊತ್ತವನ್ನು ದಾಟಿ 46 ರನ್ ಮುನ್ನಡೆ ಸಾಧಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ