ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ. ಭಾರತದ ಪರ ಯಶಸ್ವೀ ಜೈಸ್ವಾಲ್ ಮತ್ತು ನಾಯಕ ರೋಹಿತ್ ಶರ್ಮಾ ಅರ್ಧಶತಕ ಗಳಿಸಿದರು.
ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 218 ರನ್ ಗಳಿಗೆ ಆಲೌಟ್ ಆಯಿತು. ಕುಲದೀಪ್ ಯಾದವ್ 5 ಮತ್ತು ರವಿಚಂದ್ರನ್ ಅಶ್ವಿನ್ 4 ವಿಕೆಟ್ ಕಬಳಿಸಿದರು. ವೇಗಿಗಳಿಗೆ ಯಾವುದೇ ಯಶಸ್ಸು ಸಿಗಲಿಲ್ಲ. ಮತ್ತೆ ಬಾಝ್ ಬಾಲ್ ಆಟ ಆಡಲು ಹೋಗಿ ಇಂಗ್ಲೆಂಡ್ ಸಂಪೂರ್ಣ ಹಳಿ ತಪ್ಪಿತು.
ಈ ಮೊತ್ತ ಬೆನ್ನತ್ತಿದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ-ಯಶಸ್ವೀ ಜೈಸ್ವಾಲ್ ಅತ್ಯುತ್ತಮ ಆರಂಭ ನೀಡಿದರು. ಯಶಸ್ವೀ ಜೈಸ್ವಾಲ್ ಎಂದಿನಂತೇ ಬಿರುಸಿನ ಆಟವಾಡಿದರು. 3 ಸಿಕ್ಸರ್, 5 ಬೌಂಡರಿ ಸಹಿತ 58 ಎಸೆತಗಳಿಂದ 57 ರನ್ ಗಳಿಸಿ ಉತ್ತಮ ಲಯದಲ್ಲಿದ್ದರು. ಆದರೆ ದುರದೃಷ್ಟವಶಾತ್ ಶೊಯೇಬ್ ಬಾಶಿರ್ ಎಸೆತದಲ್ಲಿ ಕೀಪರ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಆದರೆ ಈ ಸರಣಿಯಲ್ಲಿ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿರುವ ಯಶಸ್ವಿ ಎರಡು ದ್ವಿಶತಕಗಳೊಂದಿಗೆ 700 ಪ್ಲಸ್ ರನ್ ಗಳಿಸಿದ ಸಾಧನೆ ಮಾಡಿದರು. ಇದರೊಂದಿಗೆ ಒಂದೇ ಸರಣಿಯಲ್ಲಿ ಗರಿಷ್ಠ ರನ್ ಸಂಪಾದಿಸಿದ ಕೊಹ್ಲಿ ದಾಖಲೆಯನ್ನು ಮುರಿದು ಎರಡನೇ ಸ್ಥಾನಕ್ಕೇರಿದರು. ಅಲ್ಲದೆ ಅತೀ ವೇಗವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ 1000 ರನ್ ಪೂರೈಸಿದ ದಾಖಲೆ ಮಾಡಿದರು. ಅಲ್ಲದೆ ಎಲ್ಲಾ ಟೆಸ್ಟ್ ಪಂದ್ಯದಲ್ಲೂ 50 ಪ್ಲಸ್ ರನ್ ಸಿಡಿಸಿದ ಅಪರೂಪದ ದಾಖಲೆ ಅವರದ್ದಾಯಿತು.
ಆದರೆ ಇನ್ನೊಂದು ತುದಿಯಲ್ಲಿ ನಾಯಕನ ಆಟವಾಡಿದ ರೋಹಿತ್ ಶರ್ಮಾ 83 ಎಸೆತಗಳಿಂದ 56 ರನ್ ಗಳಿಸಿ ಇದರಲ್ಲಿ ಎರಡು ಮನಮೋಹಕ ಸಿಕ್ಸರ್ ಕೂಡಾ ಸೇರಿತ್ತು. ಇದರೊಂದಿಗೆ ಡಬ್ಲ್ಯುಟಿಸಿ ಟೂರ್ನಿಯಲ್ಲಿ 50 ಪ್ಲಸ್ ಸಿಕ್ಸರ್ ಸಿಡಿಸಿದ ದಾಖಲೆ ಅವರದ್ದಾಯಿತು. ರೋಹಿತ್ ಜೊತೆಗೆ ಕ್ರೀಸ್ ಹಂಚಿಕೊಂಡಿರುವ ಶುಬ್ಮನ್ ಗಿಲ್ ಕೂಡಾ ಉತ್ತಮ ಲಯದಲ್ಲಿದ್ದು, ದಿನದಂತ್ಯಕ್ಕೆ 26 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದೀಗ ಭಾರತ ಮೊದಲ ಇನಿಂಗ್ಸ್ ನಲ್ಲಿ ಕೇವಲ 83 ರನ್ ಗಳ ಹಿನ್ನಡೆಯಲ್ಲಿದೆ.