ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ಆರಂಭವಾಗಲಿದೆ.
ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಟೀಂ ಇಂಡಿಯಾಕ್ಕೆ ಇದು ಮಹತ್ವದ ಸರಣಿಯಾಗಲಿದೆ. ತವರಿನಲ್ಲಿ ಆಂಗ್ಲರನ್ನು ಕೆಡವಲು ಭಾರತ ಸ್ಪಿನ್ ಅಸ್ತ್ರ ರೆಡಿ ಮಾಡಿಕೊಂಡಿದೆ. ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಪಡೆಯನ್ನು ಎದುರಿಸಲು ರೋಹಿತ್ ಶರ್ಮಾ ಪಡೆ ಈಗಾಗಲೇ ಕಠಿಣ ಅಭ್ಯಾಸ ನಡೆಸಿದೆ.
ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿರುವುದು ಕೊಂಚ ಹಿನ್ನಡೆ ಉಂಟು ಮಾಡಬಹುದು. ಆದರೆ ತವರಿನಲ್ಲಿ ಭಾರತದ ಯುವ ಬ್ಯಾಟಿಗರೂ ಯಾವುದೇ ತಂಡದ ವಿರುದ್ಧವೂ ಅದ್ಭುತ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ಭಾರತದಲ್ಲಿ ಸ್ಪಿನ್ ಗೆ ಸಹಕಾರಿಯಾಗುವ ಪಿಚ್ ಆಗಿರುವುದರಿಂದ ರವಿಚಂದ್ರನ್ ಅಶ್ವಿನ್-ಜಡೇಜಾ ಜೋಡಿ ಕಮಾಲ್ ನೋಡಬಹುದು. ಅತ್ತ ಜಾನಿ ಬೇರ್ ಸ್ಟೋ, ಬೆನ್ ಸ್ಟೋಕ್ಸ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್ ರಂತಹ ಘಟಾನುಘಟಿ ಆಟಗಾರರನ್ನು ಒಳಗೊಂಡಿರುವ ಇಂಗ್ಲೆಂಡ್ ತಂಡವೂ ಬಲಿಷ್ಠವಾಗಿದೆ.
ಇಂಗ್ಲೆಂಡ್ ಗೆ ಸ್ಪಿನ್ ಪಿಚ್ ಆತಂಕ: ಭಾರತದಲ್ಲಿ ಇಂಗ್ಲೆಂಡ್ ತಂಡಕ್ಕೆ ಸದಾ ಕಾಡುವುದು ಸ್ಪಿನ್ ಪಿಚ್. ಆದರೆ ಈ ಬಾರಿ ನಾವು ಅದಕ್ಕೂ ಸಿದ್ಧರಾಗಿಯೇ ಬಂದಿದ್ದೇವೆ ಎಂದು ಈಗಾಗಲೇ ಇಂಗ್ಲೆಂಡ್ ಹೇಳಿಕೊಂಡಿದೆ. ಸ್ಪಿನ್ ವಿಭಾಗದಲ್ಲಿ ಜ್ಯಾಕ್ ಲೀಚ್, ಟಾಮ್ ಹಾರ್ಟ್ಲೀ,ರೆಹಾನ್ ಅಹಮ್ಮದ್ ರಂತಹ ಯುವ ಸ್ಪಿನ್ ತಜ್ಞರನ್ನು ಕರೆತಂದಿದೆ. ಭಾರತೀಯ ಬ್ಯಾಟಿಗರು ಹೊಸ ಬೌಲರ್ ಗಳ ಮುಂದೆ ಮಂಡಿಯೂರುವ ಚಾಳಿ ಹೊಂದಿದ್ದಾರೆ. ಹೀಗಾಗಿ ಈ ಬೌಲರ್ ಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಜೊತೆಗೆ ಜೇಮ್ಸ್ ಆಂಡರ್ಸನ್ ನಂತಹ ಸ್ಟಾರ್ ವೇಗಿಯ ಬಲ ತಂಡಕ್ಕಿದೆ.
ಭಾರತೀಯ ಕಾಲಮಾನ ಪ್ರಕಾರ ಈ ಪಂದ್ಯ 9.30 ಕ್ಕೆ ಆರಂಭವಾಗಲಿದೆ. ಜಿಯೋ ಸಿನಿಮಾ ಆಪ್ ಮತ್ತು ಸ್ಪೋರ್ಟ್ಸ್ 18 ನೆಟ್ ವರ್ಕ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.