IND vs ENG: ದಾಖಲೆಗಳ ಮೇಲೆ ದಾಖಲೆ ಮಾಡಿದ ರೋಹಿತ್ ಶರ್ಮಾ, ಶುಬ್ಮನ್ ಗಿಲ್

Krishnaveni K

ಶುಕ್ರವಾರ, 8 ಮಾರ್ಚ್ 2024 (12:04 IST)
Photo Courtesy: Twitter
ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಭರ್ಜರಿ ಶತಕ ಗಳಿಸಿರುವ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಹಲವು ದಾಖಲೆಗಳನ್ನು ಮಾಡಿದ್ದಾರೆ. ಅದರ ವಿವರ ಇಲ್ಲಿದೆ.

ಭಾರತ ಮೊದಲ ಇನಿಂಗ್ಸ್ ನಲ್ಲಿ ಈಗಾಗಲೇ ಬೃಹತ್ ಮುನ್ನಡೆಯತ್ತ ಸಾಗಿದೆ. ನಿನ್ನೆ ಅಜೇಯರಾಗುಳಿದಿದ್ದ ರೋಹಿತ್ ಮತ್ತು ಶುಬ್ಮನ್ ಇಂದು ಶತಕ ಪೂರೈಸಿದರು. ರೋಹಿತ್ 102 ರನ್ ಗಳಿಸಿದರೆ ಗಿಲ್ 101 ರನ್ ಗಳಿಸಿದರು. ಈ ಮೂಲಕ ಇಬ್ಬರೂ ಇದೇ ಸರಣಿಯಲ್ಲಿ ಎರಡನೇ ಬಾರಿ ಶತಕ ಗಳಿಸಿದರು. ಅದಲ್ಲದೆ ಇಬ್ಬರೂ ಇನ್ನೂ ಕೆಲವು ದಾಖಲೆಗಳನ್ನು ಮಾಡಿದ್ದಾರೆ.

2021 ರ ನಂತರ ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಮೊದಲ ಸ್ಥಾನಕ್ಕೇರಿದರೆ ಶುಬ್ಮನ್ ಗಿಲ್ ಎರಡನೇ ಸ್ಥಾನಕ್ಕೇರಿದರು. ರೋಹಿತ್ 2021 ರಿಂದ ಇಲ್ಲಿಯವರೆಗೆ ಟೆಸ್ಟ್ ನಲ್ಲಿ ಒಟ್ಟು 6 ಶತಕ ಮತ್ತು ಗಿಲ್ 4 ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಗರಿಷ್ಠ ಶತಕ ಸಿಡಿಸಿದ ಭಾರತೀಯ ಆರಂಭಿಕರ ಪಟ್ಟಿಯಲ್ಲೂ ರೋಹಿತ್ ಈಗ ಸುನಿಲ್ ಗವಾಸ್ಕರ್ ಜೊತೆಗೆ ಮೊದಲನೇ ಸ್ಥಾನ ಹಂಚಿಕೊಂಡರು. ಇಂಗ್ಲೆಂಡ್ ವಿರುದ್ಧ ಆರಂಭಿಕರಾಗಿ ಅವರಿಗೆ ಇದು ನಾಲ್ಕನೇ ಶತಕವಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆರಂಭಿಕರಾಗಿ ಗರಿಷ್ಠ ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಈಗ 43 ಶತಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದರು.  ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದರು. ಇದಲ್ಲದೆ ನಿನ್ನೆ ರೋಹಿತ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ 50 ಪ್ಲಸ್ ಸಿಕ್ಸರ್ ಸಿಡಿಸಿದ ದಾಖಲೆ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ