IND vs ENG test: ಕುಲದೀಪ್ ಯಾದವ್ ಗೆ 5, ಅಶ್ವಿನ್ ಗೆ 4 ವೇಗಿಗಳಿಗೆ ಏನಿಲ್ಲಾ.. ಏನಿಲ್ಲಾ

Krishnaveni K

ಗುರುವಾರ, 7 ಮಾರ್ಚ್ 2024 (15:07 IST)
Photo Courtesy: Twitter
ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ ಭಾರತದ ಸ್ಪಿನ್ ದಾಳಿಗೆ ತತ್ತರಿಸಿ 218 ರನ್ ಗಳಿಗೆ ಆಲೌಟ್ ಆಗಿದೆ. ಕುಲದೀಪ್ ಯಾದವ್, ರವಿಚಂದ್ರನ್ ಅಶ್ವಿನ್ ಮಿಂಚಿದರೆ ವೇಗಿಗಳು ವಿಕೆಟ್ ಕೀಳಲು ವಿಫಲರಾಗಿದ್ದಾರೆ.

ಟಾಸ್ ಗೆದ್ದ ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಗೆ ಆರಂಭಿಕ ಬೆನ್ ಡಕೆಟ್-ಜಾಕ್ ಕ್ರಾವ್ಲೇ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ತಂಡ 64 ರನ್ ಗಳಿಸಿದ್ದಾಗ ಬೆನ್ ಡಕೆಟ್ ರೂಪದಲ್ಲಿ ಕುಲದೀಪ್ ಯಾದವ್ ಮೊದಲ ಬಲಿ ಪಡೆದರು. ಅದಾದ ಬಳಿಕ ಒಲಿ ಪಾಪ್ (11), ಜಾಕ್ ಕ್ರಾವ್ಲೇ ವಿಕೆಟ್ ಗಳನ್ನು ಕುಲದೀಪ್ ತಮ್ಮದಾಗಿಸಿಕೊಂಡರು. ಈ ಪೈಕಿ ಜಾಕ್ ಕ್ರಾವ್ಲೇ 79 ರನ್ ಗಳಿಸಿದರು.

ನಾಲ್ಕನೇ ವಿಕೆಟ್ ನ್ನೂ ಬೇರ್ ಸ್ಟೋ ರೂಪದಲ್ಲಿ ಕುಲದೀಪ್ ತಮ್ಮದಾಗಿಸಿಕೊಂಡರು. ಬಳಿಕ ರವೀಂದ್ರ ಜಡೇಜಾ ಎಸೆತದಲ್ಲಿ 26 ರನ್ ಗಳಿಸಿದ್ದ ಜೋ ರೂಟ್ ಔಟಾದರು. ನಾಯಕ ಬೆನ್ ಸ್ಟೋಕ್ಸ್ ರನ್ನು ಶೂನ್ಯಕ್ಕೆ ಔಟ್ ಮಾಡಿದ ಕುಲದೀಪ್ ಯಾದವ್ ತಮ್ಮ ಐದನೇ ಬಲಿ ಪಡೆದರು.

ಇಲ್ಲಿಯವರೆಗೂ ಸೈಲಂಟಾಗಿದ್ದ 100 ನೇ ಟೆಸ್ಟ್ ಪಂದ್ಯವಾಡುತ್ತಿರುವ ರವಿಚಂದ್ರನ್ ಅಶ್ವಿನ್ ಈಗ ಬೇಟೆ ಆರಂಭಿಸಿದರು. ಮೊದಲು ಟಾಮ್ ಹಾರ್ಟ್ಲೇ ವಿಕೆಟ್ ಪಡೆದ ಅಶ್ವಿನ್ ಬಳಿಕ ಮಾರ್ಕ್ ವುಡ್, ಬೆನ್ ಫೋಕ್ಸ್ ಮತ್ತು ಜೇಮ್ಸ್ ಆಂಡರ್ಸನ್ ವಿಕೆಟ್ ಪಡೆದು ಒಟ್ಟು ನಾಲ್ಕು ವಿಕೆಟ್ ತಮ್ಮದಾಗಿಸಿಕೊಂಡರು. ಇದರೊಂದಿಗೆ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಗೆ ಏನಿಲ್ಲಾ ಎನ್ನುವ ಪರಿಸ್ಥಿತಿಯಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ