IND vs ENG: ರವಿಚಂದ್ರನ್ ಅಶ್ವಿನ್ ಮೈಲಿಗಲ್ಲಿನ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಗೆಲುವಿನ ತವಕ

Krishnaveni K

ಗುರುವಾರ, 7 ಮಾರ್ಚ್ 2024 (08:09 IST)
ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಐದು ಟೆಸ್ಟ್ ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಧರ್ಮಶಾಲಾ ಮೈದಾನದಲ್ಲಿ ನಡೆಯಲಿದೆ.

ಟೀಂ ಇಂಡಿಯಾ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಗೆ ಇದು 100 ನೇ ಟೆಸ್ಟ್ ಪಂದ್ಯ ಎನ್ನುವುದು ವಿಶೇಷ. ಹೀಗಾಗಿ ಭಾರತ ತಂಡ ಈ ಪಂದ್ಯವನ್ನು ಗೆದ್ದು ಅಶ್ವಿನ್ ಗೆ ಸ್ಮರಣೀಯ ಉಡುಗೊರೆ ನೀಡಲು ಪ್ರಯತ್ನಿಸಲಿದೆ.  ಆದರೆ ಧರ್ಮಶಾಲಾದಲ್ಲಿ ಐದೂ ದಿನ ಪಂದ್ಯ ನಡೆಯಲು ಹವಾಮಾನ ಅನುವು ಮಾಡಿಕೊಡುತ್ತದೆಯೇ ಎಂದು ಕಾದು ನೋಡಬೇಕಿದೆ.

ಕಳೆದ ಮೂರು ಪಂದ್ಯಗಳಲ್ಲಿ ಸತತವಾಗಿ ಗೆದ್ದ ಟೀಂ ಇಂಡಿಯಾ ಸರಣಿ ತನ್ನದಾಗಿಸಿಕೊಂಡಿದೆ. ಹಾಗಾಗಿ ಇಂದಿನ ಪಂದ್ಯದ ಫಲಿತಾಂಶ ಸರಣಿ ಮೇಲೆ ಪ್ರಭಾವ ಬೀರದು. ಆದರೂ ಕೊನೆಯ ಪಂದ್ಯವನ್ನೂ ಎದುರಾಳಿಗೆ ಬಿಟ್ಟುಕೊಡುವ ಮೂಡ್ ನಲ್ಲಿ ರೋಹಿತ್ ಪಡೆಯಿಲ್ಲ. ಇಲ್ಲಿನ ಚಳಿಯ ವಾತಾವರಣದಲ್ಲಿ ಬೌಲಿಂಗ್ ಮಾಡುವುದು ಸುಲಭವಲ್ಲ. ಹೀಗಾಗಿ ಬೌಲರ್ ಗಳು ಕಷ್ಟಪಡಬೇಕಾಗುತ್ತದೆ.

ಈ ಪಂದ್ಯದ ಮೂಲಕ ಭಾರತದ ಪರ ಕನ್ನಡಿಗ ದೇವದತ್ತ ಪಡಿಕ್ಕಲ್ ಪದಾರ್ಪಣೆ ಮಾಡುವ ವಿಶ್ವಾಸವಿದೆ. ಕಳೆದ ಮೂರು ಪಂದ್ಯಗಳಲ್ಲಿ ಅವಕಾಶ ಸಿಕ್ಕಿಯೂ ಸಾಬೀತುಪಡಿಸದ ರಜತ್ ಪಾಟೀದಾರ್ ಗೆ ಕೊಕ್ ಸಿಕ್ಕರೂ ಅಚ್ಚರಿಯಿಲ್ಲ. ಒಂದು ವೇಳೆ ರಜತ್ ಗೆ ಇನ್ನೊಂದು ಅವಕಾಶ ನೀಡಬೇಕಾದರೆ ಕುಲದೀಪ್ ಯಾದವ್ ರನ್ನು ಹೊರಗಿಡಬೇಕಾದೀತು. ಇನ್ನು ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಕಮ್ ಬ್ಯಾಕ್ ಮಾಡಿರುವುದರಿಂದ ಆಕಾಶ್ ದೀಪ್ ಅಥವಾ ಕುಲದೀಪ್ ಯಾದವ್ ಸ್ಥಾನ ಬಿಟ್ಟುಕೊಡಬೇಕಾದೀತು. ಪಿಚ್ ಗೆ ಸ್ಪಿನ್ ಗೆ ಸಹಕರಿಸುವುದಿದ್ದರೆ ಸಿರಾಜ್ ಅಥವಾ ಆಕಾಶ್ ದೀಪ್ ಇಬ್ಬರಲ್ಲಿ ಒಬ್ಬರು ಅನಿವಾರ್ಯವಾಗಿ ಹೊರಗುಳಿಯಬೇಕಾಗುತ್ತದೆ. ಹೀಗಾಗಿ ಇಂದಿನ ಪ್ಲೇಯಿಂಗ್ ಇಲೆವೆನ್ ಬಗ್ಗೆ ಕುತೂಹಲವಿದೆ. ಜಿಯೋ ಸಿನಿಮಾದಲ್ಲಿ ಇದೀಗ 9.30 ರಿಂದ ನೇರಪ್ರಸಾರ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ