ಧರ್ಮಶಾಲಾ: ಇಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 100 ನೇ ಟೆಸ್ಟ್ ಪಂದ್ಯದ ಸಾಧನೆ ಮಾಡುತ್ತಿರುವ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೇಲೆ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ ಅಪವಾದವೊಂದನ್ನು ಹೊರಿಸಿದ್ದಾರೆ.
ಸೋಷಿಯಲ್ ಮೀಡಿಯಾ ಎಕ್ಸ್ ಮೂಲಕ ರವಿಚಂದ್ರನ್ ಅಶ್ವಿನ್ ಮೇಲೆ ಶಿವರಾಮಕೃಷ್ಣನ್ ಅಸಮಾಧಾನ ಹೊರಹಾಕಿದ್ದಾರೆ. ಹಿರಿಯ ಕ್ರಿಕೆಟಿಗರಾದ ತಮಗೆ ಅಶ್ವಿನ್ ಅಗೌರವ ತೋರಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಶಿವರಾಮಕೃಷ್ಣನ್ ಅಪವಾದವೇನು ಇಲ್ಲಿ ನೋಡಿ.
ಅಶ್ವಿನ್ 100 ನೇ ಟೆಸ್ಟ್ ಪಂದ್ಯವಾಡುತ್ತಿರುವ ಹಿನ್ನಲೆಯಲ್ಲಿ ಅವರಿಗೆ ಸಂದೇಶ ಕಳುಹಿಸಿದ್ದಲ್ಲದೆ ಅಭಿನಂದನೆ ಸಲ್ಲಿಸಲು ಕರೆ ಕೂಡಾ ಮಾಡಿದ್ದೆ. ಆದರೆ ಅಶ್ವಿನ್ ಸಂದೇಶಕ್ಕೂ ಉತ್ತರಿಸಲಿಲ್ಲ. ಕಾಲ್ ಮಾಡಿದರೆ ಕಟ್ ಮಾಡಿದರು. ನಮ್ಮಂತಹ ಹಿರಿಯ ಕ್ರಿಕೆಟಿಗರಿಗೆ ಸಿಗುವ ಗೌರವವಿದು ಎಂದಿದ್ದಾರೆ.
ಇದಕ್ಕೆ ಮೊದಲು ಕಳೆದ ವರ್ಷ ಅಶ್ವಿನ್ ಬಗ್ಗೆ ಶಿವರಾಮಕೃಷ್ಣನ್ ಟೀಕೆ ವ್ಯಕ್ತಪಡಿಸಿದ್ದರು. ಇಂತಹ ಬಿರುಕಿನ ಪಿಚ್ ನಲ್ಲಿ ಎಂಥಾ ಮೂರ್ಖನಿಗಾದರೂ ವಿಕೆಟ್ ಸಿಗಬಹುದು ಎಂದು ಅಶ್ವಿನ್ ಬಗ್ಗೆ ಟೀಕೆ ಮಾಡಿದ್ದರು. ಅಲ್ಲದೆ, ಅಶ್ವಿನ್ ಅತ್ಯಂತ ಅನ್ ಫಿಟ್, ಫೀಲ್ಡಿಂಗ್ ಮಾಡಲೂ ಲಾಯಕ್ಕಿಲ್ಲದ ಆಟಗಾರ ಎಂದೆಲ್ಲಾ ಟೀಕೆ ಮಾಡಿದ್ದರು. ಬಹುಶಃ ಇದೇ ಕಾರಣಕ್ಕೆ ಅಶ್ವಿನ್ ಕೂಡಾ ಶಿವರಾಮಕೃಷ್ಣನ್ ಕರೆಯನ್ನು ನಿರಾಕರಿಸಿದ್ದಾರೆ. ಆದರೆ 100 ನೇ ಟೆಸ್ಟ್ ಸಂಭ್ರಮದ ಹೊಸ್ತಿಲಲ್ಲೇ ಅಶ್ವಿನ್ ಬಗ್ಗೆ ಶಿವರಾಮಕೃಷ್ಣನ್ ಬಹಿರಂಗವಾಗಿ ಇಂತಹದ್ದೊಂದು ಅಪವಾದ ಹೊರಿಸಿರುವುದು ವಿಪರ್ಯಾಸ.