ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೂಲಕ 100 ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿರುವ ದಾಖಲೆ ಮಾಡಿರುವ ರವಿಚಂದ್ರನ್ ಅಶ್ವಿನ್ ತಮ್ಮ ಕುಟುಂಬ ಸಮೇತ ಮೈದಾನಕ್ಕೆ ಬಂದಿದ್ದಾರೆ.
ಇಂದಿನ ಪಂದ್ಯಾರಂಭಕ್ಕೆ ಮೊದಲು ಅಶ್ವಿನ್ ಗೆ ಟೀಂ ಇಂಡಿಯಾ ಸ್ಮರಣಿಕೆ, ಕ್ಯಾಪ್ ನೀಡಿ ಗೌರವಿಸಿತು. ಈ ಸಂದರ್ಭದಲ್ಲಿ ಮೈದಾನದಲ್ಲಿ ಅಶ್ವಿನ್ ಪತ್ನಿ ಪ್ರೀತಿ ಅಶ್ವಿನ್ ಮತ್ತು ಇಬ್ಬರು ಮಕ್ಕಳೂ ಜೊತೆಗಿದ್ದರು. ಅಶ್ವಿನ್ ರ ಸಾಧನೆಯನ್ನು ಕೋಚ್ ದ್ರಾವಿಡ್ ಹೊಗಳಿದ್ದಲ್ಲದೆ, ಕುಟುಂಬದವರಿಗೂ ಧನ್ಯವಾದ ಸಲ್ಲಿಸಿದರು. ಬಳಿಕ ಅಶ್ವಿನ್ ಕೂಡಾ ಮಾತನಾಡಿದರು.
ಇಂದಿನ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಫೀಲ್ಡಿಂಗ್ ಮಾಡುತ್ತಿದೆ. ಅಶ್ವಿನ್ ಮೈದಾನಕ್ಕಿಳಿಯುವಾಗ ಭಾರತೀಯ ಕ್ರಿಕೆಟಿಗರು ಸಾಲಾಗಿ ನಿಂತು ಅವರಿಗೆ ಗಾರ್ಡ್ ಆಫ್ ಆನರ್ ನೀಡಿ ಗೌರವಿಸಿದರು. 100 ನೇ ಟೆಸ್ಟ್ ಪಂದ್ಯವಾಡುತ್ತಿರುವ 14 ನೇ ಭಾರತೀಯ ಕ್ರಿಕೆಟಿಗ ಅಶ್ವಿನ್.
ವಿಶೇಷವೆಂದರೆ ಇದೇ ಪಂದ್ಯದಲ್ಲಿ ಇಂಗ್ಲೆಂಡ್ ನ ಜಾನಿ ಬೇರ್ ಸ್ಟೋ ಕೂಡಾ 100 ನೇ ಟೆಸ್ಟ್ ಪಂದ್ಯವಾಡುತ್ತಿದ್ದಾರೆ. ಅವರ ಕುಟುಂಬವೂ ಮೈದಾನದಲ್ಲಿ ಉಪಸ್ಥಿತರಿದ್ದರು. ಇಂಗ್ಲೆಂಡ್ ತಂಡವೂ ಜಾನಿ ಬೇರ್ ಸ್ಟೋಗೆ 100 ನೇ ಟೆಸ್ಟ್ ನ ವಿಶೇಷ ಕ್ಯಾಪ್ ನೀಡಿ ಗೌರವಿಸಿತು.