ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವೆ ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯ ನಡೆಯುವುದೇ ಅನುಮಾನವೆನ್ನಲಾಗುತ್ತಿದೆ.
ಧರ್ಮಶಾಲಾದಲ್ಲಿ ಈಗಾಗಲೇ ಅಂತಿಮ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆದಿದೆ. ಟೀಂ ಇಂಡಿಯಾದ ಕೆಲವು ಆಟಗಾರರು ಈಗಾಗಲೇ ಇಲ್ಲಿಗೆ ಬಂದಿಳಿದಿದ್ದಾರೆ. ಆದರೆ ಅಧಿಕೃತವಾಗಿ ತಂಡ ಇಂದು ಅಥವಾ ನಾಳೆಯಿಂದ ಅಭ್ಯಾಸ ಆರಂಭಿಸುವ ನಿರೀಕ್ಷೆಯಿದೆ. ಆದರೂ ಈ ಪಂದ್ಯದ ಮೇಲೆ ಈಗ ಹವಾಮಾನದ ಕಾರ್ಮೋಡ ಕವಿದಿದೆ.
ಭಾರತ ತಂಡ ಇಲ್ಲಿಗೆ ಕಾಲಿಟ್ಟ ಗಳಿಗೆಯಿಂದ ಧರ್ಮಶಾಲಾದಲ್ಲಿ ಜೋರಾಗಿ ಮಳೆಯಾಗುತ್ತಿದೆ. ಇದು ಇನ್ನೂ ಕೆಲವು ದಿನ ಮುಂದುವರಿಯುವ ಸಾಧ‍್ಯತೆಯಿದೆ. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದು. ಇದರಿಂದಾಗಿ ಪಂದ್ಯ ನಡೆಯುವುದೇ ಅನುಮಾನ ಎನ್ನುವ ಸ್ಥಿತಿಯಿದೆ.
ಭಾರತ ತಂಡ ಈಗಾಗಲೇ ಸರಣಿಯಲ್ಲಿ 3-1 ರಿಂದ ಮುನ್ನಡೆಯಲ್ಲಿದ್ದು, ಕೊನೆಯ ಪಂದ್ಯದ ಫಲಿತಾಂಶ ಟೀಂ ಇಂಡಿಯಾ ಮೇಲೆ ಯಾವುದೇ ಪರಿಣಾಮ ಬೀರದು. ಕೊನೆಯ ಪಂದ್ಯಕ್ಕೆ ಟೀಂ ಇಂಡಿಯಾಕ್ಕೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಕಮ್ ಬ್ಯಾಕ್ ಮಾಡಿದ್ದಾರೆ. ಫಲಿತಾಂಶ ಏನೇ ಇದ್ದರೂ ಈ ಪಂದ್ಯವನ್ನು ವೀಕ್ಷಿಸಲು ಕಾದಿರುವ ಪ್ರೇಕ್ಷಕರಿಗೆ ನಿರಾಸೆಯಾಗಲಿದೆ. ಯಾಕೆಂದರೆ ಇನ್ನು ಎರಡು ತಿಂಗಳಿಗೆ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಸರಣಿ ಆಡುತ್ತಿಲ್ಲ. ಐಪಿಎಲ್ ಮುಗಿದ ಬಳಿಕ ನೇರವಾಗಿ ಟಿ20 ವಿಶ್ವಕಪ್ ನಲ್ಲಿ ಕಣಕ್ಕಿಳಿಯಲಿದೆ.