IND vs NZ Test: ಕಿಂಗ್ ಕೊಹ್ಲಿ ಎಂದು ಮೆರೆಸಿದ್ದಷ್ಟೇ ಬಂತು, ಬೆಂಗಳೂರಿನಲ್ಲೇ ಡುಮ್ಕಿ

Krishnaveni K

ಗುರುವಾರ, 17 ಅಕ್ಟೋಬರ್ 2024 (11:32 IST)
Photo Credit: X
ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಪಂದ್ಯವಾರಂಭವಾಗಿದ್ದು, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್ ವಿಕೆಟ್ ಶೂನ್ಯಕ್ಕೆ ಕಳೆದುಕೊಂಡ ಭಾರತ ಸಂಕಷ್ಟಕ್ಕೀಡಾಗಿದೆ.

ಮಳೆಯಿಂದಾಗಿ ಮೊದಲ ದಿನವಾದ ನಿನ್ನೆ ಟಾಸ್ ಕೂಡಾ ನಡೆದಿರಲಿಲ್ಲ. ಆದರೆ ಇಂದು ಮಳೆ ಬಿಡುವು ತೋರಿದ್ದರಿಂದ ಪಂದ್ಯ ಆರಂಭವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಟೀಂ ಇಂಡಿಯಾ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಅದರಲ್ಲೂ ಭಾರತದ ದಿಗ್ಗಜ ಬ್ಯಾಟಿಗರೆನಿಸಿಕೊಂಡಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಪೆವಿಲಿಯನ್ ಸೇರಿಕೊಂಡಿದ್ದಾರೆ.

ರೋಹಿತ್ 16 ಎಸೆತ ಎದುರಿಸಿ ಗಳಿಸಿದ್ದು ಕೇವಲ 2 ರನ್. ವಿರಾಟ್ ಕೊಹ್ಲಿಗೆ ಚಿನ್ನಸ್ವಾಮಿ ಮೈದಾನ ಎರಡನೇ ತವರಿದ್ದಂತೆ. ಆರ್ ಸಿಬಿ ಅಭಿಮಾನಿಗಳು ಅವರನ್ನು ಲೋಕಲ್ ಆಟಗಾರನಂತೇ ಮೆರೆಸುತ್ತಾರೆ. ಅವರನ್ನು ನೋಡಲೆಂದೇ ಇಲ್ಲಿ ಜನ ಸೇರುತ್ತಾರೆ. ಅದರೆ 9 ಎಸೆತ ಎದುರಿಸಿದ ಕೊಹ್ಲಿ ಖಾತೆ ತೆರೆಯುವ ಮುನ್ನವೇ ಔಟಾಗಿ ನಿರ್ಗಮಿಸಿದರು.

ಅವರ ಹಿಂದೆಯೇ ಗಿಲ್ ಜಾಗದಲ್ಲಿ ಅವಕಾಶ ಪಡೆದಿದ್ದ ಸರ್ಫರಾಜ್ ಖಾನ್ ಕೂಡಾ ಶೂನ್ಯಕ್ಕೆ ನಿರ್ಗಮಿಸಿದಾಗ ಭಾರತ ಸಂಕಷ್ಟಕ್ಕೀಡಾಯಿತು. ಒಂದು ಹಂತದಲ್ಲಿ 10 ರನ್ ಗೆ 3  ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಈಗ ಚೇತರಿಕೆ ನೀಡುತ್ತಿರುವುದು ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್.

ಸಾಮಾನ್ಯವಾಗಿ ಜೈಸ್ವಾಲ್ ಬಿರುಸಿನ ಇನಿಂಗ್ಸ್ ಆಡುತ್ತಾರೆ. ಆದರೆ ಇಂದು ಪರಿಸ್ಥಿತಿಗೆ ತಕ್ಕಂತೆ ಆಡುತ್ತಿದ್ದಾರೆ. ಇದುವರೆಗೆ 55 ಎಸೆತ ಎದುರಿಸಿ 12 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇನ್ನೊಂದೆಡೆ ರಿಷಭ್ 26 ಎಸೆತಗಳಿಂದ 11 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ ಇತ್ತೀಚೆಗಿನ ವರದಿ ಬಂದಾಗ 3 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ