IND vs SA T20: ಸರಣಿ ಗೆಲುವಿನ ಜೊತೆಗೆ ದಾಖಲೆಗಳ ರಾಶಿಯೇ ಕಲೆ ಹಾಕಿದ ಟೀಂ ಇಂಡಿಯಾ, ಇಲ್ಲಿದೆ ಡೀಟೈಲ್ಸ್

Krishnaveni K

ಶನಿವಾರ, 16 ನವೆಂಬರ್ 2024 (09:27 IST)
Photo Credit: BCCI
ವಾಂಡರ್ಸಸ್: ದ ಆಫ್ರಿಕಾ ವಿರುದ್ಧ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆ ಮಾಡಲೆಂದೇ ಕಣಕ್ಕಿಳಿದಂತಾಗಿತ್ತು. ಈ ಪಂದ್ಯವನ್ನು 135 ರನ್ ಗಳ ದೊಡ್ಡ ಅಂತರದಿಂದ ಗೆದ್ದ ಟೀಂ ಇಂಡಿಯಾ ದಾಖಲೆಗಳ ರಾಶಿಯನ್ನೇ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಸಂಜು ಸ್ಯಾಮ್ಸನ್, ತಿಲಕ್ ವರ್ಮ ಅಬ್ಬರದ ಶತಕದಿಂದಾಗಿ 20 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 283 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆಫ್ರಿಕಾ 18.2 ಓವರ್ ಗಳಲ್ಲಿ 148 ರನ್ ಗಳಿಗೆ ಆಲೌಟ್ ಆಗಿತ್ತು.

ಸಂಜು ಸ್ಯಾಮ್ಸನ್-ತಿಲಕ್ ವರ್ಮ ದಾಖಲೆಗಳು
ಸಂಜು ಸ್ಯಾಮ್ಸನ್ ಒಂದೇ ವರ್ಷದಲ್ಲಿ ಟಿ20 ಕ್ರಿಕೆಟ್ ನಲ್ಲಿ ಮೂರು ಶತಕ ಸಿಡಿಸಿದ ವಿಶ್ವ ದಾಖಲೆ ಮಾಡಿದರು. ಈ ಶತಕದೊಂದಿಗೆ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ (4) ಶತಕ ಗಳಿಸಿದ ವಿಶ್ವ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಾಲ್ವರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ.

ಇನ್ನು ತಿಲಕ್  ವರ್ಮಗೆ ಇದು ಟಿ20 ಕ್ರಿಕೆಟ್ ನಲ್ಲಿ ಇದು ಸತತ ಎರಡನೇ ಶತಕವಾಗಿದೆ. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ ಸತತ ಎರಡು ಶತಕ ದಾಖಲಿಸಿದ ವಿಶಿಷ್ಟ ದಾಖಲೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಐದನೇ ಆಟಗಾರನೆನಿಸಿಕೊಂಡರು. ಇದಕ್ಕೆ ಮೊದಲು ಇದೇ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಇದೇ ದಾಖಲೆ ಮಾಡಿದ್ದರು.

ಈ ಇಬ್ಬರೂ ಆಟಗಾರರು ಜೊತೆಗೂಡಿ ಒಟ್ಟು 19 ಸಿಕ್ಸರ್ ಸಿಡಿಸಿದ್ದಾರೆ. ಇಬ್ಬರೂ 2 ನೇ ವಿಕೆಟ್ ಗೆ 210 ರನ್ ಗಳ ಜೊತೆಯಾಟವಾಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ಗರಿಷ್ಠ ರನ್ ಜೊತೆಯಾಟವಾಡಿದ ದಾಖಲೆ ಮಾಡಿದರು. 283 ರನ್ ಭಾರತ ಟಿ20 ಕ್ರಿಕೆಟ್ ನಲ್ಲಿ ಗಳಿಸಿದ ಎರಡನೇ ಗರಿಷ್ಠ ಮೊತ್ತವಾಗಿದೆ. ಇನ್ನು, ದ ಆಫ್ರಿಕಾಗೆ ಇದು ಬೃಹತ್ ರನ್ ಅಂತರದ ಸೋಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ