ಭಾರತ-ದ.ಆಫ್ರಿಕಾ ಟೆಸ್ಟ್: ಇನಿಂಗ್ಸ್ ಹಿನ್ನಡೆ ಭೀತಿಯಲ್ಲಿ ದ.ಆಫ್ರಿಕಾ

ಶುಕ್ರವಾರ, 4 ಅಕ್ಟೋಬರ್ 2019 (17:17 IST)
ವಿಶಾಖಪಟ್ಟಣ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೂರನೇ ದಿನದಾಟದಲ್ಲಿ ದ.ಆಫ್ರಿಕಾ ಮೊದಲ ಇನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿ ದಿನದಾಟ ಮುಗಿಸಿದೆ.


ಮೊದಲ ಇನಿಂಗ್ಸ್ ನಲ್ಲಿ ಭಾರತ 502 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಈ ಮೊತ್ತ ಬೆನ್ನತ್ತಿದ್ದ ಆಫ್ರಿಕಾಗೆ ಆರಂಭದಲ್ಲಿ ಆಘಾತ ಸಿಕ್ಕರೂ ಮಧ್ಯಮಕ್ರಮಾಂಕದಲ್ಲಿ ನಾಯಕ ಫಾ ಡು ಪ್ಲೆಸಿಸ್ ಮತ್ತು ಆರಂಭಿಕ ಡೀನ್ ಎಲ್ಗರ್ ಉತ್ತಮ ಜತೆಯಾಟವಾಡಿ ಚೇತರಿಕೆ ನೀಡಿದರು. ಪ್ಲೆಸಿಸ್ 55 ರನ್ ಗೆ ವಿಕೆಟ್ ಒಪ್ಪಿಸಿದರೆ ಡೀನ್ ಎಲ್ಗರ್ ಭರ್ಜರಿ ಶತಕ ಗಳಿಸಿ 160 ರನ್ ಗಳಿಸಿ ಔಟಾದರು. ಬಳಿಕ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕ್ವಿಂಟನ್ ಡಿ ಕಾಕ್ ಕೂಡಾ ಅತ್ಯುತ್ತಮ ಆಟವಾಡಿ 111 ರನ್ ಗಳಿಸಿ ಔಟಾದರು.

ಇದೀಗ ದಿನದಂತ್ಯದಲ್ಲಿ ಸೆನುರಾನ್ ಮುತ್ತುಸ್ವಾಮಿ 12 ಮತ್ತು ಕೇಶವ್ ಮಹಾರಾಜ್ 3 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದ ಪರ ರವಿಚಂದ್ರನ್ ಅಶ್ವಿನ್ ಗೆ 5 ವಿಕೆಟ್ ಗಳ ಗೊಂಚಲು ಸಿಕ್ಕಿದೆ. ಜಡೇಜಾ 2 ಮತ್ತು ಇಶಾಂತ್ ಶರ್ಮಾ 1 ವಿಕೆಟ್ ಪಡೆದರು. ದ.ಆಫ್ರಿಕಾ ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ 117 ರನ್ ಗಳಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ