ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ನಲ್ಲಿ ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದಾನ ಆರನೇ ಶತಕ ಸಿಡಿಸಿದ್ದಾರೆ. ಈ ಮೂಲಕ ಹಲವು ದಾಖಲೆ ನಿರ್ಮಿಸಿದ್ದಾರೆ.
ಮಹಿಳೆಯರ ಏಕದಿನ ಕ್ರಿಕೆಟ್ನಲ್ಲಿ ಆರನೇ ಶತಕ ಸಿಡಿಸಿದ ಸ್ಮೃತಿ ಮಂದಾನ, ಇದೇ ಮೊದಲ ಬಾರಿಗೆ ತವರಿನ ಮೈದಾನದಲ್ಲಿ ಶತಕ ಸಿಡಿಸಿದ್ದಾರೆ. ಹರ್ಮನ್ಪ್ರೀತ್ ಕೌರ್ ದಾಖಲೆಯನ್ನೂ ಮುರಿದಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಎಡಗೈ ಬ್ಯಾಟ್ಸ್ಮನ್ ಸ್ಮೃತಿ ಮಂದಾನ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 7000 ರನ್ ಗಡಿ ದಾಟಿ ವಿಶೇಷ ಮೈಲಿಗಲ್ಲು ತಲುಪಿದ್ದಾರೆ. 59 ರನ್ ಗಳಿಸಿದಾಗ ಈ ದಾಖಲೆ ಬರೆದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಥಾಲಿ ರಾಜ್ ಬಳಿಕ 7000 ರನ್ಗಳ ಗಡಿ ದಾಟಿದ ಭಾರತದ ಮಹಿಳಾ ತಂಡದ ಎರಡನೇ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ. ಮಿಥಾಲಿ 10868 ರನ್ ಸಿಡಿಸಿದ್ದಾರೆ.
ಇದಲ್ಲದೆ ಮಹಿಳಾ ಕ್ರಿಕೆಟ್ನಲ್ಲಿ ಆರಂಭಿಕ ಆಟಗಾರ್ತಿಯಾಗಿ ಅತ್ಯಧಿಕ 50+ ಸ್ಕೋರ್ ಗಳಿಸಿದ 3ನೇ ಆಟಗಾರ್ತಿ ಎನಿಸಿದ್ದಾರೆ. ನ್ಯೂಜಿಲೆಂಡ್ನ ಸೂಜಿ ಬೇಟ್ಸ್ ಏಕದಿನ ಕ್ರಿಕೆಟ್ನಲ್ಲಿ 32 ಬಾರಿ ಈ ಸಾಧನೆ ಮಾಡಿದ್ದಾರೆ.
116 ಎಸೆತಗಳನ್ನು ಎದುರಿಸಿ ವೃತ್ತಿಜೀವನದ 6ನೇ ಶತಕ ದಾಖಲಿಸಿದ ಸ್ಮೃತಿ ಅವರ ಇನ್ನಿಂಗ್ಸ್ನಲ್ಲಿ 10 ಬೌಂಡರಿ, 1 ಸಿಕ್ಸರ್ ಇದೆ. ಅಲ್ಲದೆ ಭಾರತ ಮಹಿಳಾ ತಂಡದ ಪರ ಅಧಿಕ ಶತಕ ಸಿಡಿಸಿದ 2ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹರ್ಮನ್ಪ್ರೀತ್ ಕೌರ್ 5 ಶತಕ ಸಿಡಿಸಿದ್ದು, ಅವರನ್ನು ಸ್ಮೃತಿ ಹಿಂದಿಕ್ಕಿದ್ದಾರೆ. ಮಿಥಾಲಿ ರಾಜ್ 7 ಏಕದಿನ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.