ಡಬ್ಲ್ಯುಪಿಎಲ್ 2024: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗೆ ಮೊದಲ ಗೆಲುವು

Krishnaveni K

ಶನಿವಾರ, 24 ಫೆಬ್ರವರಿ 2024 (08:45 IST)
Photo Courtesy: Twitter
ಬೆಂಗಳೂರು: ಡಬ್ಲ್ಯುಪಿಎಲ್ 2024 ರ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 4 ವಿಕೆಟ್ ಗಳ ಗೆಲುವು ಕಂಡಿದೆ. ಈ ಮೂಲಕ ಹಾಲಿ ಚಾಂಪಿಯನ್ಸ್ ಶುಭಾರಂಭ ಮಾಡಿದ್ದಾರೆ.

ಟಾಸ್ ಗೆದ್ದ ಮುಂಬೈ ನಾಯಕಿ ಹರ್ಮನ್ ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅಲೈಸ್ ಕ್ಯಾಪ್ಸಿ ಸ್ಪೋಟಕ 75 ರನ್, ಜೆಮಿಮಾ ರೊಡ್ರಿಗಸ್ 42 ಮತ್ತು ನಾಯಕಿ ಮೆಗ್ ಲ್ಯಾನಿಂಗ್ 31 ರನ್ ಸಿಡಿಸಿದರು. ಇದರಿಂದಾಗಿ ಡೆಲ್ಲಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಮುಂಬೈ ಪರ ಬೌಲಿಂಗ್ ನಲ್ಲಿ ಸಿವರ್ ಬ್ರಂಟ್, ಅಮೆಲಿಯಾ ಕೆರ್ ತಲಾ 2, ಶಬ್ನಿಮ್ ಇಸ್ಮಾಲಿ 1 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ಮುಂಬೈ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ರೋಚಕ ಗೆಲುವು ಕಂಡಿತು. ಸಿವರ್ ಬ್ರಂಟ್ ಅವರ ಪ್ರಮುಖ ವಿಕೆಟ್ ಕಳೆದುಕೊಂಡ ಯಶಿಕಾ ಭಾಟಿಯಾಗೆ ಸಾಥ್ ನೀಡಿದ್ದು ನಾಯಕಿ ಹರ್ಮನ್ ಪ್ರೀತ್ ಕೌರ್. ಕೇವಲ 34 ಎಸೆತಗಳಿಂದ ಹರ್ಮನ್ 55 ರನ್ ಸಿಡಿಸಿದರು. ಇನ್ನೊಂದೆಡೆ ಯಶಿಕಾ 45 ಎಸೆತಗಳಿಂದ 57 ರನ್ ಗಳಿಸಿದರು. ಕೊನೆಯ ಎಸೆತದಲ್ಲಿ ಮುಂಬೈಗೆ 5 ರನ್ ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಕೇರಳ ಮೂಲದ ಯುವ ಪ್ರತಿಭೆ ಎಸ್. ಸಾಜನಾ ಸಿಕ್ಸರ್ ಸಿಡಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ಕೊಡಿಸಿದರು.

ಇದರೊಂದಿಗೆ ಮುಂಬೈ ಮೊದಲ ಪಂದ್ಯದಲ್ಲೇ ಗೆಲುವು ಕಂಡಿತು. ಜೊತೆಗೆ ಡಬ್ಲ್ಯುಪಿಎಲ್ ಟೂರ್ನಿಗೆ ರೋಚಕ ಆರಂಭ ಸಿಕ್ಕಿತು. ಡೆಲ್ಲಿ ಪರ ಅರುಂದತಿ ರೆಡ್ಡಿ, ಅಲೈಸ್ ಕ್ಯಾಪ್ಸಿ ತಲಾ 2, ಮರಿಝನೆ ಕಪ್, ಶಿಖಾ ಪಾಂಡೆ ತಲಾ 1 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ