IND vs ENG test: ದಾಖಲೆಗಾಗಿ ಪೈಪೋಟಿ ನಡೆಸಲಿದ್ದಾರೆ ಬುಮ್ರಾ, ಅಶ್ವಿನ್

Krishnaveni K

ಗುರುವಾರ, 15 ಫೆಬ್ರವರಿ 2024 (08:35 IST)
ರಾಜ್ ಕೋಟ್: ಇಂದಿನಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಅನುಭವಿ ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ದಾಖಲೆ ಮಾಡಲಿದ್ದಾರೆ.

ಕಳೆದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಬೌಲಿಂಗ್ ನೇತೃತ್ವವನ್ನು ಈ ಇಬ್ಬರು ಅನುಭವಿಗಳು ವಹಿಸಿದ್ದರು. ಇಬ್ಬರೂ ಸೇರಿಕೊಂಡು ಅತೀ ಹೆಚ್ಚು ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನುಲುಬು ಮುರಿದಿದ್ದರು. ಇದೀಗ ಇಬ್ಬರೂ ತಮ್ಮದೇ ಆದ ಹೊಸ ದಾಖಲೆ ಮಾಡುವ ಹೊಸ್ತಿಲಲ್ಲಿದ್ದಾರೆ.

ರವಿಚಂದ್ರನ್ ಅಶ್ವಿನ್ 500 ರ ದಾಖಲೆ
ಟೀಂ ಇಂಡಿಯಾ ಕಂಡ ಯಶಸ್ವೀ ಸ್ಪಿನ್ನರ್ ಗಳಲ್ಲಿ ಒಬ್ಬರಾಗಿರುವ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ 500  ವಿಕೆಟ್ ಕಬಳಿಸಿದ ದಾಖಲೆ ಮಾಡಲು ಇನ್ನು ಒಂದೇ ವಿಕೆಟ್ ಹಿಂದಿದ್ದಾರೆ. ಇದುವರೆಗೆ ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ 500 ಪ್ಲಸ್ ವಿಕೆಟ್ ಕಬಳಿಸಿರುವುದು ಅನಿಲ್ ಕುಂಬ್ಳೆ ಮಾತ್ರ. ಇದೀಗ ಅಶ್ವಿನ್ ಒಂದು ವಿಕೆಟ್ ಪಡೆದರೆ ಗರಿಷ್ಠ  ವಿಕೆಟ್ ಪಡೆದ ಬೌಲರ್ ಮತ್ತು 500 ಪ್ಲಸ್ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಮಾಡಲಿದ್ದಾರೆ. ಅನಿಲ್ ಕುಂಬ್ಳೆ ಒಟ್ಟು 619 ವಿಕೆಟ್ ಪಡೆದಿದ್ದರು. ಇದೀಗ ಅಶ್ವಿನ್ ಈ ವಿಶೇಷ ದಾಖಲೆ ಮಾಡುವ ತವಕದಲ್ಲಿದ್ದಾರೆ.

ಜಾವಗಲ್ ಶ್ರೀನಾಥ್ ದಾಖಲೆ ಸರಿಗಟ್ಟಲಿರುವ ಬುಮ್ರಾ
ಸ್ಪಿನ್ ಪಿಚ್ ಆದರೂ ಕಳೆದ ಎರಡೂ ಪಂದ್ಯಗಳಲ್ಲಿ ಬುಮ್ರಾ ಬೌಲಿಂಗ್ ಮಾಡಿ ವಿಕೆಟ್ ಪಡೆದ ರೀತಿ ಅವರೆಂಥಾ ಪ್ರತಿಭಾವಂತ ಎಂಬುದಕ್ಕೆ ಸಾಕ್ಷಿಯಾಗಿತ್ತು. ಎದುರಾಳಿ ನಾಯಕನೂ ಬುಮ್ರಾ ಬೌಲಿಂಗ್ ನ್ನು ಕೊಂಡಾಡಿದ್ದರು. ಕಳೆದ ಪಂದ್ಯದಲ್ಲಿ ಬುಮ್ರಾ ಐದು ವಿಕೆಟ್ ಗಳ ಗೊಂಚಲು ಪಡೆದಿದ್ದರು. ಈ ಪಂದ್ಯದಲ್ಲಿ ಮತ್ತೊಮ್ಮೆ 5 ವಿಕೆಟ್ ಕಬಳಿಸಿದರೆ ಜಾವಗಲ್ ಶ್ರೀನಾಥ್ ಬಳಿಕ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗರಿಷ್ಠ ಬಾರಿ 5 ವಿಕೆಟ್ ಗಳ ಗೊಂಚಲು ಪಡೆದ ದಾಖಲೆ ಸರಿಗಟ್ಟಲಿದ್ದಾರೆ. ಶ್ರೀನಾಥ್ 13 ಬಾರಿ 5 ವಿಕೆಟ್ ಸಾಧನೆ ಮಾಡಿದ್ದರು. ಬುಮ್ರಾ 12 ಬಾರಿ 5 ವಿಕೆಟ್ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ