ದುಬೈ: ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ಬೌಲರ್ ಜಸ್ಪ್ರೀತ್ ಬುಮ್ರಾ ನಂ.1 ಸ್ಥಾನಕ್ಕೇರಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಕಳೆದ ಪಂದ್ಯದಲ್ಲಿ ಅವರು ಒಟ್ಟು 9 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠರಾಗಿದ್ದರು. ಇದರ ಬೆನ್ನಲ್ಲೇ ಬುಮ್ರಾ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದು, ವಿಶ್ವ ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಒಟ್ಟು 881 ಅಂಕ ಪಡೆದ ಬುಮ್ರಾ ಟೆಸ್ಟ್ ನಂ.1 ಬೌಲರ್ ಆದರು. ಇದರೊಂದಿಗೆ ಮೂರೂ ಮಾದರಿಯಲ್ಲಿ ನಂ.1 ಆದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೆ ಮೊದಲು ಬುಮ್ರಾ ಏಕದಿನ ಮತ್ತು ಟಿ20 ಮಾದರಿಯಲ್ಲಿ ನಂ.1 ಆಗಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಇದೇ ಮೊದಲ ಬಾರಿಗೆ ನಂ.1 ಸ್ಥಾನಕ್ಕೇರಿದ್ದಾರೆ. ಅಷ್ಟೇ ಅಲ್ಲದೆ, ಒಟ್ಟಾರೆಯಾಗಿ ಮೂರೂ ಮಾದರಿಯ ಕ್ರಿಕೆಟ್ ಫಾರ್ಮ್ಯಾಟ್ ನಲ್ಲಿ ನಂ.1 ಸ್ಥಾನ ಪಡೆದ ಏಷ್ಯಾ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂತರ ಸ್ಥಾನ ಪಡೆದಿದ್ದಾರೆ.
ಅಶ್ವಿನ್ ಸ್ಥಾನ ಕಸಿದುಕೊಂಡ ಬುಮ್ರಾ
ವಿಶೇಷವೆಂದರೆ ಇದುವರೆಗೂ ಟೆಸ್ಟ್ ನಂ.1 ಬೌಲರ್ ಹೆಗ್ಗಳಿಕೆಗೆ ಭಾರತದ್ದೇ ಆಗಿತ್ತು. ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ನಂ.1 ಬೌಲರ್ ಆಗಿದ್ದರು. ಆದರೆ ಅವರ ಸ್ಥಾನವನ್ನು ಈಗ ಬುಮ್ರಾ ಆಕ್ರಮಿಸಿಕೊಂಡಿದ್ದಾರೆ. ಅಶ್ವಿನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಒಟ್ಟು 841 ಅಂಕ ಗಳಿಸಿರುವ ಅಶ್ವಿನ್ ಮೂರಕ್ಕೆ ತೃಪ್ತಿಪಟ್ಟುಕೊಂಡರು. ದ.ಆಫ್ರಿಕಾದ ಕಗಿಸೊ ರಬಾಡ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕ್ಯುಮಿನ್ಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ.