ಚೆನ್ನೈ: ಐಪಿಎಲ್ 2023 ರಲ್ಲಿ ಮತ್ತೊಂದು ಪಂದ್ಯ ರೋಚಕವಾಗಿ ಕೊನೆಗೊಂಡಿದೆ. ಸಿಎಸ್ ಕೆ ವಿರುದ್ಧ ನಡೆದ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ರೋಚಕ 3 ರನ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಜೋಸ್ ಬಟ್ಲರ್ 52, ದೇವದತ್ತ ಪಡಿಕ್ಕಲ್ 38, ರವಿಚಂದ್ರನ್ ಅಶ್ವಿನ್, ಹೆಟ್ಮೈರ್ ತಲಾ 30 ರನ್ ಗಳಿಸಿದರು.
ಈ ಮೊತ್ತ ಬೆನ್ನತ್ತಿದ ಚೆನ್ನೈ ಪರ ಆರಂಭಿಕ ಡೆವನ್ ಕಾನ್ವೇ 50 ರನ್ ಸಿಡಿಸಿದರು. ಅಜಿಂಕ್ಯಾ ರೆಹಾನೆ 31 ರನ್ ಗಳಿಸಿದರು. ಆದರೆ ಇನ್ ಫಾರ್ಮ್ ಬ್ಯಾಟಿಗ ಋತುರಾಜ್ ಗಾಯಕ್ ವಾಡ್ ವಿಫಲರಾಗಿದ್ದು, ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಗರು ವಿಫಲರಾಗಿದ್ದರಿಂದ ಚೆನ್ನೈ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ನಾಯಕ ಧೋನಿ ಮತ್ತು ರವೀಂದ್ರ ಜಡೇಜಾ ಪಂದ್ಯಕ್ಕೆ ಹೊಸ ದಿಕ್ಕು ನೀಡಿದರು. ಜಡೇಜಾ 15 ಎಸೆತಗಳಿಂದ ಅಜೇಯ 25, ಧೋನಿ 17 ಎಸೆತಗಳಿಂದ ಅಜೇಯ 32 ರನ್ ಗಳಿಸಿದರು. ಈ ಜೋಡಿ ಪಂದ್ಯವನ್ನು ಗೆಲ್ಲಿಸಿಯೇ ಬಿಡುತ್ತದೆ ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಕೊನೆಯ ಓವರ್ ನ ಕೊನೆಯ ಮೂರು ಎಸೆತದಲ್ಲಿ ಸಂದೀಪ್ ಶರ್ಮಾ ಉತ್ತಮ ಬೌಲಿಂಗ್ ಮಾಡಿದರು. ಮೊದಲ ಎರಡು ಎಸೆತಗಳು ಸತತವಾಗಿ ವೈಡ್ ಆಗಿತ್ತು, ನಂತರ ಎರಡು ಎಸೆತಗಳನ್ನು ಧೋನಿ ಸಿಕ್ಸರ್ ಗಟ್ಟಿದರು. ಆದರೆ ಉಳಿದ 3 ಎಸೆತಗಳಿಂದ 7 ರನ್ ಗಳಿಸಲಾಗದೇ ಚೆನ್ನೈ ಸೋತಿತು. ಅಂತಿಮವಾಗಿ ಚೆನ್ನೈ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು.